Wednesday 1 May 2019

subudendra teertharu rayara mutt yati 40 present pontiff ಸುಬುಧೇಂದ್ರ ತೀರ್ಥರು


ಸುಬುದೇಂದ್ರ ತೀರ್ಥರ ಪರಿಚಯ: ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದ ನೂತನ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸುಬುಧೇಂದ್ರ ತೀರ್ಥ(42)ರ ಮೂಲ ನಾಮ: ರಾಜ ಪವಮಾನಾಚಾರ್ಯ. ಪೂರ್ವಾಶ್ರಮದ ತಂದೆ ರಾಜ ಗಿರಿಯಾಚಾರ್ಯ. ಪೂರ್ವಾಶ್ರಮದ ಪತ್ನಿ ಭಾರತಿ ಹಾಗೂ ಮಕ್ಕಳು: ಅಪ್ರಮೇಯ.ಅಪರ್ಣಾ, ಅಭಿಘ್ನಾ, ಅನಘಾ
ಸುಬುಧೇಂದ್ರ ತೀರ್ಥರು ವೇದ ವೇದಾಂತ ಅಧ್ಯಯನ, ಶಾಸ್ತ್ರಾಧ್ಯಯನ, ಶ್ರೀಮನ್ನ್ಯಾಯ ಸುಧಾ ಮಂಗಳ ಪದವಿ ಪಡೆದಿದ್ದಾರೆ. ಮಂತ್ರಾಲಯದಲ್ಲಿ ವ್ಯಾಸದಾಸ ಸಾಹಿತ್ಯ ಸಮನ್ವಯ ಪೀಠ ಸ್ಥಾಪಿಸಿ ಅದರ ಮೂಲಕ ಅನೇಕ ಗ್ರಂಥಗಳ ಮುದ್ರಣ ಹಾಗೂ ಪ್ರಸಾರ ಕಾರ್ಯ ಮಾಡಿದ್ದಾರೆ. ಶ್ರೀಮಠದೊಂದಿಗೆ ಕಳೆದ ಅನೇಕ ದಶಕಗಳ ಸಂಬಂಧ ಹೊಂದಿದ್ದು, ತಾತ ಶ್ರೀಸುಜಯೀಂದ್ರತೀರ್ಥರ ಕಾಲದಿಂದಲೂ ಶ್ರೀಮಠದೊಂದಿಗೆ ಒಡನಾಟ ಹೊಂದಿದ್ದಾರೆ. ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳ ಮಠದ ದಿವಾನರಾಗಿ ಕಾರ್ಯನಿರ್ವಹಿಸಿದ್ದರು.


May 2013

ಉತ್ತರಾಧಿಕಾರಿ ನೇಮಕ ಮಾಡುವ ವಿಷಯದಲ್ಲಿ ಮೂವರ ಹೆಸರು ಚಾಲ್ತಿಯಲ್ಲಿತ್ತಾದರೂ ಇದೀಗ ನೇಮಕಗೊಂಡಿರುವ ಸುಬುದೇಂದ್ರ ತೀರ್ಥರ ಹೆಸರೇ ಪ್ರಮುಖವಾಗಿ ಕೇಳಿ ಬಂದಿತ್ತು. ವಯೋ ಸಹಜದಿಂದಾಗಿ ಸುಯತೀಂದ್ರ ತೀರ್ಥರ ಆರೋಗ್ಯ ಸ್ಥಿತಿಯೂ ಮೊದಲಿನಂತೆ ಉಳಿದಿಲ್ಲ ಎಂಬ ಕಾರಣಕ್ಕೂ ಅಬ್ಬರ, ಪ್ರಚಾರವಿಲ್ಲದೇ ಉತ್ತರಾಧಿಕಾರಿ ನೇಮಕ ಪ್ರಕ್ರಿಯ ಸರಳ, ಸುಂದರವಾಗಿ ನೆರವೇರಿಸಲಾಗಿದೆ.

ಮಂತ್ರಾಲಯ ಶೀರಾಘವೇಂದ್ರ ಮಠದ ಉತ್ತರಾಧಿಕಾರಿಯಾಗಿ ಸುಬುಧೇಂದ್ರ ತೀರ್ಥರನ್ನು ನೇಮಕ ಮಾಡಲಾಗಿದೆ. ಹಾವೇರಿ ಜಿಲ್ಲೆ ಹೊಸರಿತ್ತಿಯ ಶಾಖಾಮಠದಲ್ಲಿ ಶನಿವಾರ ಧಾರ್ಮಿಕ ವಿಧಿ-ವಿಧಾನಗಳ ಉತ್ತರಾಧಿಕಾರಿಗೆ ಸುಯತೀಂದ್ರತೀರ್ಥರು ಅಧಿಕಾರ ಹಸ್ತಾಂತರಿಸಿದರು. ವರದಾ ನದಿಯಲ್ಲಿ ಪವಮಾನಾಚಾರ್ಯರು ಸ್ನಾನ, ಸಂಧ್ಯಾ ವಂದನೆ ಮುಗಿಸಿ ಕಾಷಾಯ ವಸ್ತ್ರ ಸಂಸ್ಕಾರದೊಂದಿಗೆ ಮಠಕ್ಕೆ ಆಗಮಿಸಿದರು. ಮಂತ್ರಾಲಯ ರಾಘವೇಂದ್ರ ಮಠದ ಹಿರಿಯ ಮಠಾಧಿಪತಿ ಸುಯತೀಂದ್ರ ತೀರ್ಥರು ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿ, ಬಳಿಕ ನೂತನ ಉತ್ತರಾಧಿಕಾರಿ ರಾಜ್ ಎಸ್. ಪವಮಾನಾಚಾರ್ಯರಿಗೆ ತೆಂಗಿನಕಾಯಿ ಹಸ್ತಾಂತರಿಸುವ ಮೂಲಕ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದರು. ಇದೇ ವೇಳೆ ಉತ್ತರಾಧಿಕಾರಿಯಾಗಿ ನೇಮಕಗೊಂಡ ಪವಮಾನಾಚಾರ್ಯರಿಗೆ ಸುಬುದೇಂದ್ರತೀರ್ಥ ಪಾದಂಗಳು ಎಂದು ಮರು ನಾಮಕರಣ ಮಾಡಲಾಯಿತು.

************

ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ವರ್ಧಂತಿಯ ಶುಭದಿನ.. chaitra shukla pournima (chaturdashi?)
ಇಂದು ಶ್ರೀಮನ್ಮಧ್ವಾಚಾರ್ಯ ಮಹಾಸಂಸ್ಥಾನ ಶ್ರೀರಾಘವೇಂದ್ರಮಠಾಧೀಶರಾದ ಶ್ರೀಸುಬುಧೇಂದ್ರತೀರ್ಥರ ಜನ್ಮದಿನೋತ್ಸವ, ಹಿಂದೆ ಶ್ರೀಗಳನ್ನು ಕುರಿತು 'ಸಾರಸ್ವತ ಸಾನ್ನಿಧ್ಯ'ಲೇಖನಮಾಲಿಕೆಯಲ್ಲಿ ಪ್ರಕಟವಾಗಿದ್ದ ಲೇಖನ - ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರು.
ವಿಶ್ವಗುರು ಶ್ರೀಮಧ್ವರ ಮಹಾಪರಂಪರೆಯ ವೈಶಿಷ್ಟ್ಯವೇ ಅಂತಹುದು. ಕಾಲಕಾಲಕ್ಕೆ ಮಹಾಮನೀಷಿಗಳು ಎಲ್ಲಾ ಮಠಗಳಲ್ಲಿಯೂ ಅವತರಿಸಿ ಶ್ರೀಮಧ್ವ ಸಿದ್ಧಾಂತದ ಹಿರಿಮೆಯನ್ನು ಎತ್ತಿಹಿಡಿದಿದ್ದಾರೆ. ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರಂತೂ ಶ್ರೀಟೀಕಾರಾಯರ ನ್ಯಾಯಸುಧೆಗೆ ಪರಿಮಳವನ್ನಿತ್ತು, ಚಂದ್ರಿಕೆಗೆ ಪ್ರಕಾಶವನ್ನಿತ್ತು, ಚಂದ್ರಿಕಾಚಾರ್ಯರ ಅತ್ಯಂತ ಗೂಢ,ಪ್ರೌಢ ಪ್ರಗಲ್ಬವಾದಂತಹ ತರ್ಕತಾಂಡವಕ್ಕೆ ನ್ಯಾಯದೀಪಟೀಕೆಯನ್ನು ರಚಿಸಿ ಟಿಪ್ಪಣ್ಣ್ಯಾಚಾರ್ಯ ಚಕ್ರವರ್ತಿಗಳೆಂದು ವಿದ್ವನ್ಮಾನ್ಯರಾದ ಮಹಾನುಭಾವರು. ತಮ್ಮ ವೈದುಷ್ಯದಿಂದ ಮಾಧ್ವವಾಙ್ಮಯಲೋಕದ ವಿದ್ವದ್ವಿಭೂತಿಗಳಾಗಿ ಮೆರೆಯುತ್ತಿರುವ 'ಆಶ್ರಿತಾಮರ ಕಲ್ಪಭೂಜ'ರಾದ ಶ್ರೀಗುರುರಾಜರು ಅಲಂಕರಿಸಿದ, ವಿದ್ಯಾಮಠವೆಂದೇ ಖ್ಯಾತವಾದ ಶ್ರೀರಾಘವೇಂದ್ರಸ್ವಾಮಿಗಳ ಮಠದ ಅಧುನಾ ಪೀಠಾಧಿಪತಿಗಳು ಶ್ರೀಸುಬುಧೇಂದ್ರ ತೀರ್ಥ ಶ್ರೀಮಚ್ಚರಣರು.
ಮಂತ್ರಾಲಯದ ಮಹಾಶಿಲ್ಪಿಗಳೆಂದೇ ಖ್ಯಾತರಾದ ಶ್ರೀಮಂತ್ರಾಲಯ ಮಠಾಧೀಶರಾಗಿದ್ದ ಶ್ರೀಸುಜಯೀಂದ್ರತೀರ್ಥ ಶ್ರೀಪಾದಂಗಳವರ ಪೂರ್ವಾಶ್ರಮದ ಪುತ್ರರೂ, ಮಹಾವಿದ್ವಾಂಸರೂ, 'ಮಹಾಮಹೋಪಾಧ್ಯಾಯ' ಇತ್ಯಾದಿ ಗೌರವಗಳಿಗೆ ಭಾಜನರಾಗಿರುವ 'ಪಂಡಿತಕೇಸರಿ' ಶ್ರೀರಾಜಾ.ಎಸ್.ಗಿರಿಯಾಚಾರ್ಯರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಮಂಜುಳಾಬಾಯಿಯವರ ಪುತ್ರರಾಗಿ ದಿನಾಂಕ 19-04-1971 (ಚೈತ್ರ ಶುದ್ಧ ಚತುರ್ದಶಿ) ರಂದು ಆಂಧ್ರಪ್ರದೇಶದ ಕರ್ನೂಲಿನಲ್ಲಿ ಜನಿಸಿದ ಶ್ರೀಸುಬುಧೇಂದ್ರರ ಪೂರ್ವಾಶ್ರಮದ ಹೆಸರು ಶ್ರೀರಾಜಾ.ಎಸ್.ಪವಮಾನಾಚಾರ್ಯರು. ಮಂತ್ರಾಲಯದ ಶ್ರೀಗುರುಸಾರ್ವಭೌಮವಿದ್ಯಾಪೀಠದಲ್ಲಿ 12 ವರ್ಷಗಳ ಕಾಲ ಸಂಸ್ಕೃತವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ತಮ್ಮ ಪಿತೃಪಾದರಾದ ಶ್ರೀಗಿರಿಯಾಚಾರ್ಯರಲ್ಲಿ ಶ್ರೀಪೂರ್ಣಪ್ರಜ್ಞರ ತತ್ತ್ವವಾದವನ್ನು ಆಳವಾಗಿ ಅಭ್ಯಸಿಸಿದ ಶ್ರೀಪವಮಾನಾಚಾರ್ಯರು ಮಹಾವಿದ್ವಾಂಸರಾದ ಶ್ರೀಗೋಡಾ ಸುಬ್ರಹ್ಮಣ್ಯಶಾಸ್ತ್ರಿಗಳಲ್ಲಿ ನ್ಯಾಯಶಾಸ್ತ್ರವನ್ನೂ, ಶ್ರೀಬಾಲಸುಬ್ರಹ್ಮಣ್ಯಶಾಸ್ತ್ರಿಗಳ ಬಳಿಯಲ್ಲಿ ಮೀಮಾಂಸಾಶಾಸ್ತ್ರವನ್ನೂ ಅಧ್ಯಯನ ಮಾಡಿದರು. ಗ್ರಂಥಸಂಗ್ರಹ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಅಪಾರವಾದಂತಹ ಆಸಕ್ತಿಯನ್ನು ಹೊಂದಿರುವ ಶ್ರೀ ಆಚಾರ್ಯರು ತಮ್ಮ ಪಿತೃಪಾದರಾದ ಶ್ರೀಗಿರಿಯಾಚಾರ್ಯರೊಂದಿಗೆ ಅಪೂರ್ವವಾದಂತಹ ಸುಮಾರು 40,000 ಗ್ರಂಥಗಳನ್ನು ಹೊಂದಿರುವ ಪ್ರಾಚೀನ ಗ್ರಂಥಭಂಡಾರದೊಂದಿಗೆ ಆಧ್ಯಾತ್ಮಿಕ ಕೇಂದ್ರವನ್ನು ಸ್ಥಾಪಿಸಿದರು. ಶ್ರೀರಾಘವೇಂದ್ರಮಠದ ಆಶ್ರಯದಲ್ಲಿ ನೆಡೆಯುತ್ತಿದ್ದ ಶ್ರೀಮತ್ಸಮೀರ ಸಮಯ ಸಂವರ್ಧಿನೀ ಸಭಾದ ವಿದ್ವತ್ಸಭೆಗಳಲ್ಲಿ ಭಾಗವಹಿಸುತ್ತಿದ್ದರು, ಮಾತ್ರವಲ್ಲದೆ,ಸದಾ ಗ್ರಂಥಸಂಶೋಧನೆ, ಗ್ರಂಥಸಂಗ್ರಹ, ಗ್ರಂಥಮುದ್ರಣ, ಸಂಶೋಧನಾಲೇಖನಗಳ ರಚನೆ ಮುಂತಾದ ಸಾರಸ್ವತಸೇವೆಯನ್ನು ಮುಂದುವರೆಸುತ್ತಾ ಬಂದಿದ್ದ ಶ್ರೀಪವಮಾನಾಚಾರ್ಯರ ವಿದ್ವತ್ತಿಗೆ ಉಡುಪಿಯ ಪಲಿಮಾರು ಮಠದ ಪ್ರಾತ:ಸ್ಮರಣೀಯ ಶ್ರೀವಿದ್ಯಾಮಾನ್ಯತೀರ್ಥರಿಂದ 'ನ್ಯಾಯಸುಧಾವಿದ್ವಾನ್'ಗೌರವದೊಂದಿಗೆ ಚಿನ್ನದ ಪದಕ, 1994ರಲ್ಲಿ ಮಧ್ವಸಿದ್ಧಾಂತೋನ್ನಾಹಿನಿ ಸಭೆಯಿಂದ ಗೌರವ, 1995ರಲ್ಲಿ ಘಟಿಕಾಚಲದಲ್ಲಿ ಶ್ರೀ ಪಲಿಮಾರುಶ್ರೀಗಳಿಂದ ಚಿನ್ನದ ಪದಕ, 1997ರಲ್ಲಿ ಮಾಧ್ವರಾದ್ಧಾಂತ ಸಂವರ್ಧಿನೀ ಸಭೆಯಿಂದ ಚಿನ್ನದ ಪದಕ, ಅಹೋಬಿಲ ಮಠದ ಸ್ವಾಮಿಗಳಿಂದ, ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರಿಂದ, ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥರಿಂದ , ಶ್ರೀಶ್ರೀಪಾದರಾಜಮಠದ ಶ್ರೀಗಳಿಂದ, ಶ್ರೀವ್ಯಾಸರಾಜಮಠದ ಶ್ರೀಗಳಿಂದ,ಮಂತ್ರಾಲಯದ ಶ್ರೀರಾಘವೇಂದ್ರಮಠಾಧೀಶರಾದ ಶ್ರೀಸುಶಮೀಂದ್ರತೀರ್ಥರಿಂದ ಗೌರವಗಳು ಸೇರಿ ಅನೇಕ ಪ್ರತಿಷ್ಠಿತ ಗೌರವಗಳು ಸಂದಿವೆ. ಶ್ರೀಗುರುಸಾರ್ವಭೌಮ ಸಂಸ್ಕೃತವಿದ್ಯಾಪೀಠದಲ್ಲಿ ಅಧ್ಯಾಪಕರಾಗಿ, ಶ್ರೀಗುರುಸಾರ್ವಭೌಮ ತೆಲುಗು ಮಾಸಪತ್ರಿಕೆಯ ಸಂಪಾದಕೀಯ ಮಂಡಳಿಯ ಸದಸ್ಯರಾಗಿ, ಅನೇಕ ಸಂಸ್ಕೃತ,ಕನ್ನಡ,ತೆಲುಗು ಅಧ್ಯಾತ್ಮಪತ್ರಿಕೆಗಳ ಸಂಪಾದಕರಾಗಿ, ಅನುವಾದಕರಾಗಿ, ಲೇಖಕರಾಗಿ ಸೇವೆಸಲ್ಲಿಸಿರುವ ಶ್ರೀಪವಮಾನಾಚಾರ್ಯರು ಶ್ರೀವ್ಯಾಸತತ್ತ್ವಜ್ಞರ ವಂಶಸ್ಥರಾದ ಶ್ರೀಶ್ರೀನಿವಾಸಾಚಾರ್ಯರ ಹಾಗೂ ಶ್ರೀಮತಿ ತಾರಾಬಾಯಿಯವರ ಪುತ್ರಿ ವಿರಜಾ(ಭಾರತೀ) ಎಂಬ ಕನ್ಯಾಮಣಿಯನ್ನು ವರಿಸಿ ಗೃಹಸ್ಥಾಶ್ರಮವನ್ನು ಸ್ವೀಕರಿಸಿ ನಾಲ್ಕು ಮಕ್ಕಳನ್ನು ಪಡೆದರು.
ಮಂತ್ರಾಲಯ ಶ್ರೀರಾಘವೇಂದ್ರಮಠಾಧೀಶರಾದ ಪ್ರಾತ:ಸ್ಮರಣೀಯ ಶ್ರೀಸುಯತೀಂದ್ರತೀರ್ಥ ಶ್ರೀಪಾದಂಗಳವರ ಅನುಜ್ಞೆಯಂತೆ, ಮಹಾತಪಸ್ವಿಗಳಾದ ಶ್ರೀಧೀರೇಂದ್ರತೀರ್ಥರ ದಿವ್ಯಸಾನ್ನಿಧ್ಯದ ಹೊಸರಿತ್ತಿ ಕ್ಷೇತ್ರದಲ್ಲಿ ಶ್ರೀಸುಯತೀಂದ್ರಶ್ರೀಪಾದರಿಂದ ದಿನಾಂಕ25 -05-2013ರಂದು ಸಂನ್ಯಾಸಾಶ್ರಮವನ್ನು ಸ್ವೀಕರಿಸಿದ ಶ್ರೀಪವಮಾನಾಚಾರ್ಯರಿಗೆ ಶ್ರೀಸುಯತೀಂದ್ರತೀರ್ಥರು ಅನುಗ್ರಹಿಸಿದ ಆಶ್ರಮನಾಮ ಶ್ರೀಸುಬುಧೇಂದ್ರತೀರ್ಥರು. ಕೆಲವೇ ತಿಂಗಳುಗಳಲ್ಲಿ ಶ್ರೀಸುಯತೀಂದ್ರರು ಶ್ರೀಹರಿಯ ಪದವನ್ನೈದಿದ ನಂತರ ಶ್ರೀಮಂತ್ರಾಲಯ ಶ್ರೀರಾಘವೇಂದ್ರಮಠಾಧೀಶರಾದ ಶ್ರೀಸುಬುಧೇಂದ್ರರು ಮಂತ್ರಾಲಯದ ಅಭಿವೃದ್ಧಿಗೆ ಅನೇಕ ವಿಶೇಷವಾದಂತಹ ಯೋಜನೆಗಳನ್ನು ರೂಪಿಸಿದರು ಮಾತ್ರವಲ್ಲದೆ ಅವುಗಳ ಯಶಸ್ವಿಯಾದಂತಹ ಅನುಷ್ಠಾನಕ್ಕೂ ಸದಾ ಕಾರ್ಯತತ್ಪರರಾದರು. ಅನೇಕ ಕಡೆಗಳಲ್ಲಿ ಮಠಗಳ ನಿರ್ಮಾಣ,ಪುನರ್ ನಿರ್ಮಾಣ (ಉದಾಹರಣೆಗೆ ಶ್ರೀಜಿತಾಮಿತ್ರರ ಗಡ್ಡೆಯ ಅಭಿವೃದ್ಧಿ, ಶ್ರೀವಸುಧೇಂದ್ರರ ಕೆಂಚನಗುಡ್ಡದ ಮಠದ ಪುನರ್ ನಿರ್ಮಾಣ ಮೊದಲಾದ ಅನೇಕ ಕಾರ್ಯಕ್ರಮಗಳು),ಗೋಶಾಲೆಯ ನಿರ್ಮಾಣ, ಬರ, ನೆರೆ, ಕೋವಿಡ್ 19 ಮೊದಲಾದ ಪ್ರಾಕೃತಿಕ ಸಂಕಷ್ಟಗಳು ಎದುರಾದ ಸಂದರ್ಭದಲ್ಲಿ ಬಡವರಿಗೆ, ನಿರ್ಗತಿಕರಿಗೆ ಸಹಾಯಹಸ್ತ. ಮಂತ್ರಾಲಯ ಶ್ರೀರಾಘವೇಂದ್ರಮಠವನ್ನು ಶಿಲಾಮಯಗೊಳಿಸಿದ್ದು, ಮಂತ್ರಾಲಯದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಹೆಚ್ಚು ಸಮರ್ಪಕಗೊಳಿಸಿದ್ದು, ಸನಾತನಧರ್ಮದ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಧರ್ಮಸಂರಕ್ಷಣೆಗೆ ಬೆಂಬಲವಾಗಿ ನಿಂತಿದ್ದು, ರಾಷ್ಟ್ರದ ಯಾವುದೇ ಸಂಕಷ್ಟದ ಸಮಯದಲ್ಲಿ ಮಠದ ಸಹಾಯಹಸ್ತವನ್ನು ಮೊದಲು ಚಾಚಿದ್ದು ಇವುಗಳೆನ್ನಲ್ಲವನ್ನೂ ನೋಡಿದಾಗ ಶ್ರೀಸುಬುಧೇಂದ್ರತೀರ್ಥರು ಸನಾತನ ಧರ್ಮಸಂರಕ್ಷಣೆಯ ನೇತೃತ್ವವನ್ನು ವಹಿಸಲು ಅತ್ಯಂತ ಸೂಕ್ತವಾದಂತಹ ಧಾರ್ಮಿಕ ನೇತಾರರು ಎಂದು ನಿಸ್ಸಂಶಯವಾಗಿ ಹೇಳಬಹುದು.
ಶ್ರೀಗಳ ವಾಙ್ಮಯಸೇವೆಯೂ ಅತ್ಯಪೂರ್ವವಾದದ್ದು. ಶ್ರೀರಾಘವೇಂದ್ರರ 'ಪ್ರಕಾಶ' ಟಿಪ್ಪಣಿ ಸೇರಿದಂತೆ ಆರು ಟಿಪ್ಪಣಿಗಳೊಡನೆ 2018ರಲ್ಲಿ ಶ್ರೀಚಂದ್ರಿಕಾಚಾರ್ಯರ 'ತಾತ್ಪರ್ಯ ಚಂದ್ರಿಕಾ'ಗ್ರಂಥದ ಮಂಗಳವನ್ನು ನೆರವೇರಿಸಿದ ಶ್ರೀಗಳು, 2019ರಲ್ಲಿ ಅಪೂರ್ವವಾದ ಇಪ್ಪತ್ತೈದು ಟಿಪ್ಪಣಿಗಳೊಂದಿಗೆ ಶ್ರೀಅನುವ್ಯಾಖ್ಯಾನ-ನ್ಯಾಯಸುಧಾಮಂಗಳ ಮಹೋತ್ಸವವನ್ನು ಶ್ರೀವಿಶ್ವೇಶತೀರ್ಥರು, ಶ್ರೀವಿದ್ಯಾಶ್ರೀಶರು, ಶ್ರೀವಿದ್ಯಾಸಾಗರರು ಮೊದಲಾದ ಅನೇಕ ಯತಿವರೇಣ್ಯರ ಸಮ್ಮುಖದಲ್ಲಿ ನಡೆಸಿದ್ದು ಐತಿಹಾಸಿಕವಾಗಿದೆ. ಇಪ್ಪತ್ತೈದು ಟಿಪ್ಪಣಿಗಳೊಂದಿಗೆ ನ್ಯಾಯಸುಧಾ ಗ್ರಂಥದ ಪ್ರಕಾಶನ ಶ್ರೀರಾಘವೇಂದ್ರರ ಭಾವದೀಪ ಗ್ರಂಥದ ಪ್ರಕಾಶನ ಮೊದಲಾದ ಅನೇಕ ಗ್ರಂಥಗಳ ಪ್ರಕಾಶನ ಶ್ರೀಗಳ ಮಾರ್ಗದರ್ಶನದಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ. ಸಂಸ್ಕೃತ, ಕನ್ನಡ,ಹಿಂದಿ, ತೆಲುಗು, ತಮಿಳು, ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಪ್ರವಚನ ನೀಡಬಲ್ಲ ಶ್ರೀಗಳಿಗೆ ಗುಲ್ಬರ್ಗಾ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ. ಶ್ರೀಸುಬುಧೇಂದ್ರತೀರ್ಥರು ಇನ್ನೂ ವಿಶೇಷವಾಗಿ ಶ್ರೀವೇದವ್ಯಾಸ-ಮಧ್ವ-ಜಯತೀರ್ಥ- ರಾಘವೇಂದ್ರರ ಸೇವೆಯನ್ನು ಮಾಡಿ ಸಮಾಜಕ್ಕೆ ಮಾರ್ಗದರ್ಶನ ಮಾಡಲಿ ಎಂದು ಪ್ರಾರ್ಥಿಸುತ್ತೇನೆ. ಶ್ರೀಗುರುರಾಜರ ಅಂತರ್ಯಾಮಿ, ಶ್ರೀಮಧ್ವವರದ ಜಾನಕೀತೋಷಹೇತುವಾದ ಶ್ರೀರಾಮಚಂದ್ರದೇವರು ಪ್ರೀತನಾಗಲಿ. 
-ಡಾ.ವೇಣುಗೋಪಾಲ ಬಿ.ಎನ್.
c


ಚತುರ್ಯುಗ ಮೂರ್ತಿ ಬ್ರಹ್ಮ ಕರಾರ್ಚಿತ
ಶ್ರೀ ಮನ್ಮೂಲರಘುಪತಿ ದೇವರ ದಿವ್ಯ   ಶ್ರೀಪಾದಪದ್ಮಾರಾಧಕರಾದ,
ಕಲಿಯುಗದ ಕಲ್ಪವೃಕ್ಷ ಕಾಮಧೇನುಗಳಾದ
ಶ್ರೀ ರಾಘವೇಂದ್ರ ಸ್ವಾಮಿಗಳ ಅಧಿಕೃತ ಪ್ರತಿನಿಧಿಗಳಾದ,
ಶ್ರೀ ಮದಾಚಾರ್ಯರು
ಶ್ರೀ ಜಯತೀರ್ಥರು
ಶ್ರೀ ವಿಜಯೀಂದ್ರತೀರ್ಥರು
ಶ್ರೀ ರಾಘವೇಂದ್ರ ಸ್ವಾಮಿಗಳೇ ಮೊದಲಾದ
ಮಹಾ ಮಹಾ ಜ್ಞಾನಿವರೇಣ್ಯರಾಳಿದ 
ವೇದಾಂತ ದಿಗ್ವಿಜಯ ವಿದ್ಯಾಸಿಂಹಾಸನದ 
ಪ್ರಸ್ತುತ ಚಕ್ರವರ್ತಿಗಳಾದ
ಶ್ರೀ ಸುಯತೀಂದ್ರತೀರ್ಥರ ಕರಕಮಲ ಸಂಜಾತರೂ
ಪರಮಪ್ರಿಯ ಶಿಷ್ಯರಾದ,
ಸುವರ್ಣ ಮಂತ್ರಾಲಯ ನಿರ್ಮಾತೃಗಳಾದ
ನಮಗೆಲ್ಲರಿಗೂ ರಾಯರ ಪ್ರತಿರೂಪದಂತೆ ಇದ್ದು
ರಾಯರ ಪರಮಾನುಗ್ರಹವನ್ನು ಮಾಡಿಸುತ್ತಾ,
ನಿತ್ಯದಲ್ಲಿ ಚತುರ್ಯುಗ ಮೂರ್ತಿಯಾದ
ಜಗದೇಕ ಒಡೆಯನಾದ ಮೂಲರಘುಪತಿಯ ಪಾದಸ್ಪರ್ಶ ಮಾಡಿ ಅರ್ಚಿಸಿ ಪೂಜಿಸಿ ಆರಾಧಿಸಿ
ಆ ಪರಮ ಮಂಗಳ ಮೂರ್ತಿಯ ದರ್ಶನವನ್ನು
ಭಕ್ತಾದಿಗಳಿಗೆ ಮಾಡಿಸುತ್ತಾ,
ನಿತ್ಯದಲ್ಲಿ ಶ್ರೀ ಮನ್ಯಾಯಸುಧಾ-ಚಂದ್ರಿಕಾ-ಪರಿಮಳದ ಸಾರವನ್ನು ಶಿಷ್ಯ-ಭಕ್ತರಿಗೆ ಕೊಡುತ್ತಾ
ಎಲ್ಲರನ್ನೂ ಅನುಗ್ರಹ ಮಾಡುವ
ನಮ್ಮ ಕುಲಗುರುಗಳಾದ
ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ವರ್ಧಂತಿಯ ಶುಭದಿನ...

ಸುಜಯ್ ಜೋಶಿ
************
oct 2020


ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಭಾವಚಿತ್ರ
ನಿರಂತರ ಸುಖವನ್ನು ಬಯಸಿದ ಮನುಷ್ಯನು ಸಹಜವಾಗಿ ಸುಖವನ್ನು ಹೊಂದಲು ಪ್ರಯತ್ನಿಸುತ್ತಾನೆ. ಅದಕ್ಕಾಗಿ ಪಡಬಾರದ ಕಷ್ಟವನ್ನುಪಡುತ್ತಾನೆ. ಆದರೂ ಒಂದೊಂದು ಬಾರಿ ಸುಖದ ಜೊತೆಗೆ ದುಃಖವು, ಸುಖಕ್ಕಿಂತ ಹೆಚ್ಚಾದ ದುಃಖವೂ ಅಥವಾ ಸುಖವೇ ಇಲ್ಲದೆ ದುಃಖವೂ ಬಂದು ಒದಗುವ ಸನ್ನಿವೇಶಗಳು ಎಷ್ಟೋ ಬಾರಿ ಬಂದದ್ದನ್ನು ನಾವು ಕಾಣುತ್ತೇವೆ. ಅದಕ್ಕಾಗಿ ದುಃಖದ ನಿವಾರಣೆಯೊಂದಿಗೆ ಸುಖ ಪ್ರಾಪ್ತಿಗಾಗಿ ಧರ್ಮ, ದೈವ ಮುಂತಾದವುಗಳನ್ನು ನಮ್ಮ ಭಾರತೀಯ ಶಾಸ್ತ್ರದಲ್ಲಿ ತಿಳಿಸಿ ಅದನ್ನು ಅನುಷ್ಠಾನ ಮಾಡುವುದರಿಂದ ನಮ್ಮ ಸಂಕಲ್ಪಿತ ಫಲಗಳನ್ನು ಹೊಂದಬಹುದೆಂದು ಪ್ರಾಚೀನರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಮನುಷ್ಯನಾದವನು ತನ್ನ ದೈನಂದಿನ ಯಾಂತ್ರಿಕ ಜೀವನದಲ್ಲಿ ಸಿಕ್ಕ ಸ್ವಲ್ಪ ಸಮಯದ ಮಧ್ಯೆ ತಮ್ಮ ತಮ್ಮವರ್ಣಾಶ್ರಮಧರ್ಮಗಳಿಗೆ ಅನುಕೂಲವಾದ ರೀತಿಯಲ್ಲಿ ಕರ್ಮಾನುಷ್ಠಾನವನ್ನಾಗಲಿ, ಜ್ಞಾನಾರ್ಜನೆಯನ್ನಾಗಲಿ ಮಾಡಿ ಜ್ಞಾನಯೋಗ ಅಥವಾ ಕರ್ಮಯೋಗದಿಂದ ಭಗವಂತನನ್ನು ಒಲಿಸಿಕೊಂಡು ತನಗೆ ಆಪೇಕ್ಷಿತವಾದ ಫಲವನ್ನು ಪಡೆಯಲು ಹವಣಿಸುತ್ತಾನೆ. ಶ್ರೀ ವಾದೀಂದ್ರತೀರ್ಥರು ಹೇಳುವಂತೆ- ಅಲ್ಪಮತಿಗಳಾದ ನಾವುಜ್ಞಾನಯೋಗದಿಂದ ಪರಮಾತ್ಮನನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೇನೇ ದೃಢವಾದ ಶರೀರವು ಇಲ್ಲದಿರುವುದರಿಂದ ಕರ್ಮಯೋಗವನ್ನು ಮಾಡಲಾರೆವು. ಇನ್ನು ಉಳಿದ ಮಾರ್ಗವೆಂದರೆ ಅದು ಕೇವಲ ಮಂತ್ರಾಲಯ ಗುರುಸಾರ್ವಭೌಮರಲ್ಲಿ ಮಾಡುವ ಭಕ್ತಿಯೋಗ ಒಂದೇ ಎಂಬ ಮಾತಿನಿಂದ ಇಂದುನಾವು ಅನನ್ಯ ಶರಣರಾಗಿ, ಜಗದ್ಗುರುಗಳಾದ ಶ್ರೀರಾಘವೇಂದ್ರ ಗುರುಸಾರ್ವಭೌಮರನ್ನು ಸೇವಿಸಿದರೆ ಅವರು ನಮಗೆ ಎಲ್ಲ ರೀತಿಯ ಶಕ್ತಿಯನ್ನು ಕೊಟ್ಟು ನಮ್ಮ ಕಡೆಯಿಂದ ಭಗವದನುಗ್ರಹಕ್ಕೆ ಬೇಕಾದ ಸಾಧನೆಗಳನ್ನುಮಾಡಿಸುವುದರಲ್ಲಿ ಸಂದೇಹವಿಲ್ಲ. ಹಾಗಾಗಿ ಇಂದಿನ ಪ್ರಪಂಚಕ್ಕೆ ಅಂದರೆ ಪಂಡಿತರಿಂದ ಹಿಡಿದು ಪಾಮರರವರೆಗೆ ಗುರುರಾಜರ ಮಾರ್ಗದರ್ಶನ, ಅನುಗ್ರಹ, ಪ್ರಸಾದ, ದರ್ಶನಾದಿಗಳ ಅವಶ್ಯಕತೆ ಇದೆ ಎಂಬುದು ನಿರ್ವಿವಾದ ತ್ರೈಕಾಲಿಕಸತ್ಯವಾಗಿದೆ.ಶ್ರೀಗುರುರಾಜರ ಸ್ತೋತ್ರ ಪಾರಾಯಣವಾದ ಅಷ್ಟೋತ್ತರ, ಮೃತ್ತಿಕಾ ಬೃಂದಾವನ ದರ್ಶನ, 'ಶ್ರೀರಾಘವೇಂದ್ರಾಯ ನಮಃ' ಅಷ್ಟಾಕ್ಷರ ಮಂತ್ರ (ಇದಕ್ಕೆ ಧ್ಯಾನಶ್ಲೋಕವನ್ನು ಅಂಗನ್ಯಾಸ ಕರನ್ಯಾಸಾದಿಗಳನ್ನು ಬಲ್ಲವರಿಂದ ತಿಳಿದು ಪುರುಷರಾದರೆ ಪೂರ್ವೋಕ್ತಿಗಳಲ್ಲಿ ಓಂಕಾರ ಸಹಿತವಾಗಿ, ಬೇರೆಯವರು ಶ್ರೀಕಾರಸಹಿತವಾಗಿ ಜಪಿಸಬಹುದಾಗಿದೆ) ಪಠಣಗಳಿಂದ ಗುರುರಾಯರನ್ನು ಒಲಿಸಿಕೊಳ್ಳಬಹುದು. ಮೇಲ್ಕಂಡ ಯಾವುದೇ ಪ್ರಯತ್ನವು ನಮ್ಮಿಂದ ಆಗದು ಎನ್ನುವವರಿಗೆ ಶ್ರೀಗುರುರಾಜರ ಬೃಂದಾವನಕ್ಕೆ ಪ್ರದಕ್ಷಿಣೆ ಮಾಡುವ ಮಾತ್ರದಿಂದಲೇ ಅವರ ಅನುಗ್ರಹವನ್ನು ಪಡೆದು ಬೇಡಿದ ಇಷ್ಟಾರ್ಥಗಳನ್ನು ಪಡೆಯಬಹುದಾಗಿದೆ. ಹಾಗಾಗಿ 'ಸರ್ವಯಾತ್ರ ಫಲಾವಾಪ್ತ್ಯೈ ಯಥಾಶಕ್ತಿ ಪ್ರದಕ್ಷಿಣಂ' ಎಂದು ಹೇಳಿದ್ದಾರೆ ಶ್ರೀ ಅಪ್ಪಣಾಚಾರ್ಯರು.ಮಂತ್ರಾಲಯ ಪ್ರಭುಗಳು ಸಶರೀರವಾಗಿ ಬೃಂದಾವನದಲ್ಲಿ ಇಂದಿಗೂ ಮಂತ್ರಾಲಯದಲ್ಲಿ ನೆಲೆಸಿ ಭಕ್ತರ ಕೋರಿಕೆಯಂತೆ ಕರೆದಲ್ಲಿಗೆ ಓಡಿ ಬಂದು ಭಕ್ತರನ್ನು ಪೊರೆಯಲು ಒಂದು ರೂಪವನ್ನು ತಾಳಿ ಅನುಗ್ರಹಿಸುತ್ತಿದ್ದಾರೆ. ಈ ವಿಚಾರದಲ್ಲಿ ಬೇರೆಬೇರೆ ಊರುಗಳಲ್ಲಿ, ಮೃತ್ತಿಕೆ ಬೃದಾವನಗಳಲ್ಲಿ, ಮನೆಯಲ್ಲಿ ಇಟ್ಟುಕೊಂಡ ಬೆಳ್ಳಿಬೃಂದಾವನಗಳಲ್ಲಿ, ಚಿತ್ರಪಟಗಳಲ್ಲಿ, ಅಷ್ಟೇಕೆ ಮನೆಯಲ್ಲಿ ಬರೆದ ಶ್ರೀಗುರುರಾಜರ ಹೆಸರುಗಳಿಂದಲೂ ಕೂಡಾ ಭಕ್ತರ ಕೋರಿಕೆಯಂತೆ ನೆಲೆಸಿ ಅನುಗ್ರಹಿಸುತ್ತಿರುವುದು ಎಲ್ಲರ ಅನುಭವ ವೇದ್ಯವಾಗಿದೆ.ಪಂಚರೂಪವನ್ನು ತೋರಿಸುವ ಪಂಚಾಮೃತಪಂಚಾಮೃತವೆಂದರೆ ಎಲ್ಲರಿಗೂ ಹಾಲು, ಮೊಸರು ಇತ್ಯಾದಿಗಳನ್ನು ಅಭಿಷೇಕ ಮಾಡಿದ ಪ್ರಸಾದವೆಂದು ಅರಿವಾಗುತ್ತದೆ. ಆದರೆ ನಮ್ಮ ದೃಷ್ಟಿಯಲ್ಲಿ ಆ ಪಂಚಾಮೃತವು ಒಂದು ಅಮೃತವೇ. ಅದರ ಜೊತೆಗೆ ಸೇರಿದ ನಾಲ್ಕು ಅಮೃತಗಳಿಂದ ಕೂಡಿದ, ನಾವು ಹೇಳುವ ಪಂಚಾಮೃತವೇ ಬೇರೆ. ಅದು ಪಾದೋದಕ, ಮಂತ್ರಾಕ್ಷತೆ, ಪಂಚಾಮೃತ, ಹಸ್ತೋದಕ, ಮತ್ತು ಪರಿಮಳ ಪ್ರಸಾದ ಈ ಐದು ನಮ್ಮ ದೃಷ್ಟಿಯಲ್ಲಿ ಪಂಚಾಮೃತ. ಇವುಗಳನ್ನು ಯಾರು ಭಕ್ತಿಶ್ರದ್ದೆಗಳಿಂದ ಸ್ವೀಕರಿಸುತ್ತಾರೋ ಅವರಿಗೆ ಶ್ರೀಗುರುರಾಜರು ತಮ್ಮ ಧ್ಯಾನಕ್ಕೆ ವಿಷಯನಾದ ಭಗವಂತನ ಪಂಚರೂಪಗಳನ್ನು ತೋರಿಸುತಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ.ಪಾದೋದಕರಾಮ-ನರಹರಿ ಇತ್ಯಾದಿ ರೂಪಗಳಿಂದ 700ಕ್ಕೂ ಮಿಗಿಲಾದ ಶ್ರೀಲಕ್ಷ್ಮೀನಾರಾಯಣರ ಸಾಲಿಗ್ರಾಮಗಳಿಂದ ಅಲವಭೋಧಾದಿ ಮಿಕ್ಕಯತಿಗಳಿಂದ ಕಂಗೊಳಿಸುವ ಶ್ರೀಗುರುರಾಜರ ಬೃಂದಾವನವು ಅದು ಕೇವಲ ಶಿಲೆಯಾಗಿರದೆ ಹರಿಮಂದಿರವೆಂದು ಅನೇಕರಿಗೆ ಅನುಭವ ವೇದ್ಯವಾಗಿದೆ. ಅದಕ್ಕೇನೇ ಅಂತಹ ಪವಿತ್ರ ಬೃಂದಾವನಕ್ಕೆ ಪ್ರಾತಃಕಾಲದಲ್ಲಿ ನಿರ್ಮಾಲ್ಯವಿಸರ್ಜನೆಯ ನಂತರ ಮಾಡುವ ಶುದ್ಧೋದಕ ಅಭಿಷೇಕದ ಜಲವನ್ನು ಪಾದೋದಕವೆಂದು ಕರೆಯುತ್ತಾರೆ. (ಇಂತಹ ಪಾದೋದಕ ಪ್ರಾಶನವು ಶಾಸ್ತ್ರವಿಹಿತವಲ್ಲವೆಂದು ಅನೇಕರು ಹೇಳುವುದುಂಟು. ಅಂಥವರು ಸಪ್ರಮಾಣವಾಗಿ ತಿಳಿಸುವ ಗುರುಪಾದೋದಕ ಪ್ರಾಶನ ಎಂಬ ನಮ್ಮ ಶ್ರೀಮಠದಿಂದ ಪ್ರಕಾಶಿತವಾದ ಗ್ರಂಥವನ್ನು ಅವಲೋಕಿಸಬೇಕು) ಇದನ್ನು ಪ್ರಾಶನ ಮಾಡೋಣದಿಂದ, ಪ್ರೋಕ್ಷಣೆ ಮಾಡಿಕೊಳ್ಳುವುದರಿಂದ, ನದಿಯಲ್ಲಿ ಒಂದು ಬಾರಿ ಸ್ನಾನಮಾಡಿ ಸೊಂಟದವರೆಗೂ ನೀರಿನಲ್ಲಿ ನಿಂತು ತಲೆಯ ಮೇಲೆ ಹಾಕಿಕೊಳ್ಳುವುದರಿಂದಲೂ ಅನೇಕ ರೋಗರುಜಿನಗಳು, ದುಃಖದುಮ್ಮಾನಗಳು ಪರಿಹಾರವಾಗುವುದನ್ನು ನಾವು ಇಂದಿಗೂ ಕಾಣುತ್ತಿದ್ದೇವೆ. ಹೀಗಾಗಿ ಇಂತಹ ಸುಲಭ ಉಪಾಯದಿಂದ ಶ್ರೀಗುರುರಾಜರು ಎಲ್ಲರಿಗೂ ಕೈಗೆಟುಕುವಂತೆ ನೆಲೆಸಿದ್ದಾರೆ.ಮಂತ್ರಾಕ್ಷತೆಶುದ್ಧವಾದ ಅರಿಶಿಣ, ಸುಣ್ಣದಿಂದ ಕಲೆಸಿದ ಅಕ್ಕಿಯನ್ನು ಮಂತ್ರಾಕ್ಷತೆಯೆಂದು ಕರೆಯುತಾರೆ. ಅದನ್ನು ಶ್ರೀಗುರುರಾಜರ ಪಾದುಕೆಗಳ ಮೇಲೆ, ಬೃಂದಾವನದ ಮೇಲೆ ಇರಿಸಿ ತೆಗೆದ ಮಂತ್ರಾಕ್ಷತೆ ಒಂದಾದರೆ, ಇನ್ನೊಂದು ಶ್ರೀಮಠದ ಯತಿಗಳು ಅನೇಕ ವರುಷಗಳಿಂದಲೂ ಖಾಲಿಯಾಗದಲೇ ನಡೆದುಕೊಂಡು ಬರುವ ಮಂತ್ರಾಕ್ಷತೆಯ ಬುಟ್ಟಿಯಿಂದ ಬ್ರಾಹ್ಮಣರ ಕೈಯಲ್ಲಿ ಹಾಕಿಸಿ ಮಂತ್ರೋಪೇತವನ್ನಾಗಿಸಿ ನಂತರ ಮಂತ್ರಾಕ್ಷತೆಯಲ್ಲಿ ಸಂಪ್ರದಾಯದಂತೆ ಶ್ರೀಪೀಠಾಧಿಪತಿಗಳು ಬೀಜಾಕ್ಷರಗಳನ್ನು ಬರೆದು ಅಭಿಮಂತ್ರಿಸಿ ಕೊಡುವ ಮಂತ್ರಾಕ್ಷತೆಯು ಮತ್ತೊಂದು. ಹೀಗೆ ಎರಡು ಬಗೆಯಾಗಿ ಭಕ್ತರಿಗೆ ಲಭ್ಯವಾಗುವ ಮಂತ್ರಾಕ್ಷತೆಯು ಭಕ್ತರ ಕೋರಿಕೆಗಳನ್ನು ಈಡೇರಿಸುವುದರಲ್ಲಿ ಸಮರ್ಥವಾಗಿದೆ. ಆ ಮಂತ್ರಾಕ್ಷತೆಯನ್ನು ತಲೆಮೇಲೆ ಧರಿಸುವುದರಿಂದ, ಬಾಯಲ್ಲಿ ಹಾಕಿಕೊಳ್ಳುವುದರಿಂದ, ಅನೇಕ ಕಷ್ಟಕಾರ್ಪಣ್ಯಗಳು ದೂರವಾಗುತ್ತಿರುವುದು ಎಲ್ಲರಿಗೂ ವೇದ್ಯವಾಗಿದೆ.ಪಂಚಾಮೃತಶುದ್ಧವಾದ ಗೋವಿನ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ ಇವುಗಳನ್ನು ಫಲಗಳ ಜೊತೆಯಲ್ಲಿ ಬೃಂದಾವನಕ್ಕೆ ಅಭಿಷೇಕ ಮಾಡಿದ ನಂತರ ಸಿಗುವ ಪ್ರಸಾದಕ್ಕೆ ಪಂಚಾಮೃತವೆನ್ನುವರು. ಇದನ್ನು ನಿತ್ಯದಲ್ಲೂ ಶ್ರೀಗುರುರಾಜರ ಬೃಂದಾವನಕ್ಕೆ ಸಮರ್ಪಿಸಿ ಎಲ್ಲರಿಗೂ ವಿತರಿಸುತ್ತಾರೆ. ಪಂಚಾಮೃತವನ್ನು ಸ್ವೀಕರಿಸಿ ಎಷ್ಟೋ ಜನ ಮಕ್ಕಳು ಇಲ್ಲದೆ ಇದ್ದವರು ಮಕ್ಕಳನ್ನು, ಅಂಗವಿಕಲರಾದವರು ಸುಂದರವಾದ ಶರೀರವನ್ನು, ತತ್ವಜ್ಞಾನದ ಅಪೇಕ್ಷಿಗಳಿಗೆ ತತ್ವಜ್ಞಾನಾದಿಗಳನ್ನು ಹೊಂದಿ ಗುರುಗಳ ಪೂರ್ಣಾನುಗ್ರಹಕ್ಕೆ ಪಾತ್ರರಾಗಿದ್ದಾರೆ.ಹಸ್ತೋದಕಪ್ರತಿನಿತ್ಯದಲ್ಲೂ ಭಗವಂತನ ಷೋಡಶೋಪಚಾರಗಳ ಪೂಜೆಯ ನಂತರ ಪರಿವಾರ ದೇವತೆಗಳಿಗೆ ನೈವೇದ್ಯವನ್ನು ಸಮರ್ಪಿಸಿ ನಂತರ ಗುರುಗಳಿಗೆ ಮಾಡುವ ಭಗವನ್ನೈವೇದ್ಯ ಸಮರ್ಪಣೆಯನ್ನು ಹಸ್ತೋದಕ ಎಂದು ಕರೆಯುತ್ತಾರೆ. (ಈ ಹಸ್ತೋದಕ ಪ್ರಾಶನವು ಶಾಸ್ತ್ರವಿಹಿತವೇ ಸಂದೇಹವುಳ್ಳವರು, ನಮ್ಮ ಶ್ರೀಮಠದ ಹಸ್ತೋದಕ ಸ್ವೀಕಾರವು ಶಾಸ್ತ್ರವಿಹಿತವೆಂಬ ವಿಚಾರದಲ್ಲಿ ಬರೆದ 'ಹಸ್ತೋದಕ ಮಹಿಮ ಎಂಬ ಪುಸ್ತಕವನ್ನು ಪರಾಮರ್ಶಿಸಬೇಕು) ಇದನ್ನು ಪ್ರತಿನಿತ್ಯದಲ್ಲೂ ಭಕರ್ತಿಗೆ ಭೋಜನದಲ್ಲಿ ಪ್ರಸಾದರೂಪದಿಂದ ಬೆರೆಸಿಕೊಡುವುದುಂಟು. ಇದರಿಂದ ಅನೇಕ ಇಷ್ಟಾರ್ಥಗಳನ್ನು ಪಡೆದು ಶ್ರೀಗುರುರಾಜರ ಪೂರ್ಣಾನುಗ್ರಹಕ್ಕೆ ಪಾತ್ರರಾಗಿದ್ದನ್ನು ಕಾಣಬಹುದಾಗಿದೆ. ಪರಿಮಳ ಪ್ರಸಾದಪ್ರಾತಃಸ್ಮರಣೀಯರಾದ ನಮ್ಮ ಪರಮೇಷ್ಟಿ ಗುರುಗಳಾದ ಶ್ರೀಸುಜಯೀಂದ್ರತೀರ್ಥ ಶ್ರೀಪಾದಂಗಳವರು ಮಂತ್ರಾಲಯಕ್ಕೆ ಬಂದ ಭಕ್ತರಿಗೆ ಅನುಕೂಲವಾದ ರೀತಿಯಲ್ಲಿ ತಮ್ಮ ತಮ್ಮ ಊರುಗಳಿಗೆ ಕೊಂಡೊಯ್ಯಲು 'ಪರಿಮಳ ಪ್ರಸಾದ'ವೆಂಬ ಒಂದು ಪ್ರಸಾದವನ್ನು ಮಾಡಿಸಿ ಗುರುಗಳಿಗೆ ಸಮರ್ಪಿಸಿ ಭಕ್ತರಿಗೆ ವಿತರಿಸುವ ವ್ಯವಸ್ಥೆಯನ್ನು ಮಾಡಿರುತ್ತಾರೆ. ಶ್ರೀಮಜ್ಜಯತೀರ್ಥರ ಮೇರುಕೃತಿ ಎನಿಸಿದ 'ಶ್ರೀಮನ್ನ್ಯಾಯಸುಧಾ'ಗೆಶ್ರೀಗುರುರಾಜರು ಬರೆದ ವ್ಯಾಖ್ಯಾನಕ್ಕೆ 'ಪರಿಮಳ'ವೆಂದು ಹೆಸರು. ಅದು ಹೇಗೆ ಸುಧೆಯ ಪರಿಮಳವನ್ನು ಹೊರಗೆ ಸೂಸುತ್ತದೆಯೋ, ಅದರಂತೆ ಈ 'ಪರಿಮಳ ಪ್ರಸಾದ'ವೂ ಕೂಡ ಶ್ರೀಗುರುರಾಜರ ವಿಶಿಷ್ಟಮಹಿಮೆ ಎಂಬ ಪರಿಮಳವು ಜಗತ್ತಿನಲ್ಲಿ ಸೂಸುವಂತಾಗಲಿ ಎಂದು ಸಮರ್ಪಿಸಿದ ಈ ಪರಿಮಳ ಪ್ರಸಾದವನ್ನುಪರಿಶುದ್ಧವಾದ ಸಜ್ಜಿಗೆ, ತುಪ್ಪ, ಸಕ್ಕರೆ, ಗೋಡಂಬಿ, ದ್ರಾಕ್ಷಿ, ಕೇಸರಿ, ಪಚ್ಚಕರ್ಪೂರ, ಏಲಕ್ಕಿ ಮುಂತಾದ ಸುಗಂಧದ್ರವ್ಯಗಳಿಂದ ತಯಾರಿಸಿ ಗುರುಗಳಿಗೆ ಸಮರ್ಪಿಸಿ ಕೊಡಲಾಗುವುದು. ಇದನ್ನು ಪಡೆದ ಜನರು ಒಂದು ತಿಂಗಳವರೆಗೆ ಮನೆಯಲ್ಲಿ ಇಟ್ಟು ಸ್ವೀಕರಿಸುವಂತಾಗಿದೆ. ಯಾರು ದರುಶನವನ್ನು ಪಡೆದು ಅವಸರದಿಂದ ಊರಿಗೆ ಹೊರಡುವರೊ ಅಂತವರಿಗೆ ಈ ಪ್ರಸಾದವು ಅತ್ಯಂತ ಸುಲಭ ಉಪಾಯ. ಇದನ್ನುಸ್ವೀಕರಿಸಿದ ಜನರು ಶ್ರೀರಾಯರ ಅನುಗ್ರಹದ ಅನುಭವವನ್ನು ಮಂತ್ರಾಲಯದಲ್ಲಿಯೂ, ಬೇರೆ ಕಡೆಯಲ್ಲೂ ನಮ್ಮಮುಂದೆ ಹೇಳಿದ್ದುಂಟು. ಹೀಗೆ ಪರಿಮಳ ಪ್ರಸಾದವು ಕೂಡ ಶ್ರೀಗುರುರಾಜರ ಅನುಗ್ರಹಕ್ಕೆ ಒಂದು ಸಾಧನೆಯಾಗಿದೆ.ಮೇಲ್ಕಂಡ  ಐದು ಪದಾರ್ಥಗಳು 'ಪಂಚಾಮೃತ'ವಿದ್ದಂತೆ. ಅದನ್ನು ಭಕ್ತಿ ಶದ್ಧೆಗಳಿಂದ ಸ್ವೀಕರಿಸಿ ಶ್ರೀಗುರುಸಾರ್ವಭೌಮರ ಅನುಗ್ರಹಕ್ಕೆ ನಾವು ಪಾತ್ರರಾದರೆ ತಪ್ಪದೆಲೆ ಅವರು ಅನಿರುದ್ಧಾದಿ ಪಂಚ ಭಗವದ್ರೂಪಗಳ ದರುಶನವನ್ನು ಮಾಡಿಸಿ ಮಾನವರ ಪುರುಷಾರ್ಥಗಳನ್ನು ಈಡೇರಿಸುವುದರಲ್ಲಿ ಸಂದೇಹವೇ ಇಲ್ಲ.ಒಬ್ಬ ವಿದ್ವನ್ಮಾನ್ಯರಿಂದ ಆರಂಭಿಸಿ ಸಾಮಾನ್ಯ ಮನುಷ್ಯರಿಗೂ ಕೂಡ ಗುರುಗಳು ಸುಲಭೋಪಾಯಗಳಿಂದ ಲಭ್ಯರು  ಎಂಬುವುದಕ್ಕೆ ನಮ್ಮ ಈ ಮೇಲ್ಕಂಡ ವಿವರಣೆಯು ಬೆಳಕನ್ನು ಚೆಲ್ಲಬಹುದೆಂದು ಆಶಿಸುತ್ತೇವೆ.=
 ಶ್ರೀ ಸುಬುಧೇಂದ್ರ ತೀರ್ಥರು
******
November 11, 2020



ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಶ್ರೀ ಗಳಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಘೋಷಣೆ.
೨೦ ರಂದು ನಡೆಯಲಿರುವ ಘಟಿಕೋತ್ಸವದಲ್ಲಿ  ಗೌರವ ಡಾಕ್ಟರೇಟ್
 ಪ್ರದಾನ
ವಿಶ್ವವಿದ್ಯಾಲಯ ಸಿಂಡಿಕೇಟ್ ಮೂಲಕ ೧೦ ಜನರ ಹೆಸರು ಶಿಫಾರಸು ಮಾಡಲಾಗಿತ್ತು.
ಶೋಧನಾ ಸಮಿತಿ ೧೦ರಲ್ಲಿ ಮೂವರ ಹೆಸರು ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು.
ಇದೀಗ ರಾಜ್ಯಪಾಲರು ಮಂತ್ರಾಲಯ ಶ್ರೀಗಳ ಹೆಸರು ಅಂತಿಮಗೊಳಿಸಿ ಹಸಿರು ನಿಶಾನೆ ತೋರಿದ್ದಾರೆ.🙏🙏🙏🙏
********

ಹಂಸನಾಮಕ ಪರಮಾತ್ಮನ ಸಾಕ್ಷಾತ್ ಪರಂಪರೆಯಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರಿಗೆ ವಿದ್ಯಾವಾರಿಧಿ (ಡಾಕ್ಟರೇಟ್) ಎಂಬ ಪ್ರಶಸ್ತಿ ಬಂದ ಈ ಶುಭ ಸಮಾರಂಭದಲ್ಲಿ  ಚಿ|| ಭಾರತಿಶಾಚಾರ್ಯ ಇಭರಾಮಪುರ ಇವರಿಂದ ಸ್ತೋತ್ರರೂಪವಾಗಿ ಗುರುಗಳಿಗೆ ವಂದನಾರ್ಪಣೆ.

तपोज्ञानादिभिर्युक्तं मूलरामसुतप्रियम् ।
सुबुधेन्द्रं सद्गुरुं वन्दे सदा विद्यार्थिवत्सलम् ।।  

गोसेवाविषये तावत् प्रथितं प्रथमं यतिम् ।
सुबुधेन्द्रं सद्गुरुं वन्दे सदा विद्यार्थिवत्सलम् ।।

सर्वभाषाप्रवीणं तं सद्विद्याबोधकं यतिम् ।
सुबुधेन्द्रं सद्गुरुं वन्दे सदा विद्यार्थिवत्सलम् ।।

गिर्वाणार्णवमज्जितो यतिरिति यो संप्रसिद्धो भुवि
यो विद्वद्वरवन्दितो हि सततं शास्त्रार्थसंरक्षकम् ।
श्रीमन्न्यायसुधादिशास्त्रमखिलं शिष्याय संपाठयन् 
तं वन्दे सुबुधेन्द्रतीर्थव्रतिनं विद्यासमुद्रं गुरुम् ।।


********
ಮಂತ್ರಾಲಯದ ಶಿಲ್ಪಿಗಳೆಂದೇ ಪ್ರಸಿದ್ಧರಾದ ಮಹಾನುಭಾವರು , ಹಾಗೂ ಈಗಿನ ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಬುದೇಂದ್ರ ತೀರ್ಥ ಶ್ರೀಪಾದಂಗಳವರ ಪೂರ್ವಾಶ್ರಮದ ತಾತ ಶ್ರೀ ಸುಜಯಿಂದ್ರ ತೀರ್ಥ ಶ್ರೀಪಾದಂಗಳವರು . 

ದಿನಾಂಕ : 26.04.2021 - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ಶುದ್ಧ ಚತುರ್ದಶೀ - ಸೋಮವಾರ -  ನಮ್ಮ ಪ್ರೀತಿಯ ಗುರುಗಳಾದ ನಗುಮೊಗದ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥರ 50ನೇ ವರ್ಧಂತಿ ಮಹೋತ್ಸವ - ಶ್ರೀ ಕ್ಷೇತ್ರ ಮಂತ್ರಾಲಯ  "

ಈಶ್ವರಃ ಸರ್ವ ಭೂತಾನಾಂ 

ಹೃದ್ದೇಶೇರ್ಜುನ ತಿಷ್ಠತಿ ।

ಭ್ರಾಮಯನ್ ಸರ್ವ ಭೂತಾನಿ 

ಯಂತ್ರಾರೂಢಾನಿ ಮಾಯಯಾ ।। 18/61 ।।

" ಸದುಪಾಸನೆ ಮಾಡುವ ಭಗವದ್ಭಕ್ತರು ಶ್ರೀ ಹರಿಯ ಪ್ರತಿಮೆಗಳಂತೆ ಮಾನ್ಯ " 

 ಈ ಉಪಾಸನೆಗೈವರಿಳೆಯೊಳು ।

ದೇವತೆಗಳಲ್ಲದಲೆ ನರರ - ।

ಲ್ಲಾವ ಬಗೆಯಿಂದಾ-

ದರಿವರರ್ಚನೆಯು ಹರಿಪೂಜೆ ।।

ಕೇವಲ ಪ್ರತಿಮೆಗಳೆನಿಪರು । ರ ।

ಮಾ ವಿನೋದಿಗೆ ಇವರನುಗ್ರಹ - ।

ವೇ ವರಾನುಗ್ರಹವೆನಿಸುವದು -

ಮುಕ್ತಿ ಯೋಗ್ಯರಿಗೆ ।। ಹ ಸಾ : 13/9 ।।

ಈ ರೀತಿ ಉಪಾಸನೆಯನ್ನು ಮಾಡುವವರು ಭೂಮಿಯಲ್ಲಿ ದೇವತೆಗಳೇ ಹೊರತು ಮನುಷ್ಯರಲ್ಲ !

ಯಾವುದೇ ರೀತಿಯಲ್ಲಿ ಅವರನ್ನು ಪೂಜಿಸುವದು ಸಹ ಶ್ರೀ ಹರಿಯ ಪೂಜೆಯ ಆಗುವದು !

ಅವರು ಶ್ರೀ ಹರಿಗೆ ಮುಖ್ಯ ಪ್ರತಿಮೆ ಎನ್ನಿಸುವರು. 

ಮುಕ್ತಿ ಯೋಗ್ಯರಿಗೆ ಇವರ ಅನುಗ್ರಹವೇ ಶ್ರೇಷ್ಠ ಅನುಗ್ರಹವೆನ್ನಿಸುವದು !!

" ಪ್ರತಿಮಾ ಪೂಜೆ ಶ್ರೀ ಹರಿ ಪೂಜೆಯಾಗಲು ಅವರಲ್ಲಿರುವ ಸನ್ನಿಧಾನವೇ ಕಾರಣವಷ್ಟೇ - ಶ್ರೀ ಹರಿಯ ಭಕ್ತರ ಅನುಗ್ರಹ ಪಡೆದ ಅನಂತರವೇ ಲಭಿಸುವುದು " ಎಂಬ ತತ್ತ್ವವು ಅಡಕವಾಗಿದೆ. 

ಮುಕುಂದಭಕ್ತ್ಯೈ ಗುರುಭಕ್ತಿಜಾಯೈ 

ಸತಾಂ ಪ್ರಸಾತ್ತ್ಯೈ ಚ ನಿರಂತರಾಯೈ ।

ಗರೀಯಸೀವಿಶ್ವಗುರೋರ್ವಿಶುದ್ಧಾಂ

ವಕ್ಷ್ಯಾಮಿ ವಾಯೋರವತಾರ ಲೀಲಾಮ್ ।।

ಯೆಂಬ ಪ್ರಮಾಣಗಳಂತೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಇದ್ದಾರೆ. 

ನಾಡಿನ ಸಕಲ ಸಜ್ಜನ ವೃಂದಕ್ಕೂ ಗುರು ಸ್ಥಾನದಲ್ಲಿದ್ದು - ಅವರಿಗೆ ಮಾರ್ಗದರ್ಶಕರಾಗಿಯೂ - ಹಿತ ಚಿಂತಕರಾಗಿಯೂ - ಭಕ್ತರ ಉದ್ಧಾರಕ್ಕಾಗಿ ಶ್ರೀ ಹರಿ ವಾಯು ರಾಯರಲ್ಲಿ ಭಕ್ತಿ ಶ್ರದ್ಧೆಗಳಿಂದ ಪ್ರಾರ್ಥಿಸಿ ಪರಮಾನುಗ್ರಹ ಮಾಡುತ್ತಿರುವ ಪೂತಾತ್ಮರು. 

ಪರಮ ಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ವರ್ಧಂತಿ ಮಹೋತ್ಸವದ ಶುಭ ಸಂದರ್ಭದಲ್ಲಿ ಅವರ ಕುರಿತು ತಿಳಿಸುವ ಚಿಕ್ಕ ಪ್ರಯತ್ನವಿಲ್ಲಿದೆ. 

" ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥರ ಸಂಕ್ಷಿಪ್ತ ಮಾಹಿತಿ "

" ಪೂರ್ವಾಶ್ರಮದ ಹೆಸರು "

ವಿದ್ವಾನ್ ಶ್ರೀ ರಾಜಾ ಎಸ್ ಪವಮಾನಾಚಾರ್ಯರು 

" ತಂದೆ "

ಮಹಾಮಹೋಪಾಧ್ಯಾಯ - ಪಂಡಿತ ಕೇಸರಿ - ವಿದ್ವಾನ್ ಡಾ ।। ಸುಜ್ಞಾನೇಂದ್ರಾಚಾರ್ಯರು [ ಶ್ರೀ ಗಿರಿಯಾಚಾರ್ಯರು ]

" ತಾಯಿ "

ಸಾಧ್ವೀ ಮಂಜುಳಾಬಾಯಿ 

" ಜನನ "ವಿರೋಧಿ ನಾಮ ಸಂವತ್ಸರ - ಉತ್ತರಾಯಣ - ವಸಂತ ಋತು - ಚೈತ್ರ ಶುದ್ಧ ಚತುರ್ದಶೀ [ 09.04.1971 ]

" ಜನ್ಮ ಸ್ಥಳ "ಕರ್ನೂಲು - ಆಂಧ್ರಪ್ರದೇಶ 

" ಗೋತ್ರ "ಗೌತಮ 

" ವಂಶ "ಷಾಷ್ಠಿಕ 

" ಮನೆತನ "ಬೀಗಮುದ್ರೆ 

" ಕುಲದೈವ "ಶ್ರೀ ತಿರುಮಲೆಯ ಚೆಲುವ ಶ್ರೀ ಶ್ರೀನಿವಾಸದೇವರು 

" ಕುಲ ಗುರುಗಳು "ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರು 

" ವಿದ್ಯಾಭ್ಯಾಸ "" ಸ್ತೋತ್ರ - ಕಾವ್ಯ "

ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಜಯೀ೦ದ್ರ ತೀರ್ಥರು, ಪರಮೇಷ್ಠಿ ಗುರುಗಳು. 

" ಸಮಗ್ರ ದ್ವೈತ ವೇದಾಂತ ಶಾಸ್ತ್ರ "

ಮಹಾಮಹೋಪಾಧ್ಯಾಯ - ಪಂಡಿತ ಕೇಸರಿ - ವಿದ್ವಾನ್ ಡಾ ।। ಸುಜ್ಞಾನೇಂದ್ರಾಚಾರ್ಯರು [ ಶ್ರೀ ಗಿರಿಯಾಚಾರ್ಯರು ]

"  ಪ್ರಾಚೀನ ಮತ್ತು ನವೀನ ನ್ಯಾಯ ಶಾಸ್ತ್ರ "

ರಾಷ್ಟ್ರಪತಿ ಪ್ರಶಸ್ತಿ ವಿಜೇತ - ನ್ಯಾಯ ಶಾಸ್ತ್ರ ಕೋವಿದ - ವಿದ್ವಾನ್ ಶ್ರೀ ಗೋಡಾ ಸುಬ್ರಹ್ಮಣ್ಯ ಶಾಸ್ತ್ರಿಗಳು   

" ಮೀಮಾಂಸಾ ಶಾಸ್ತ್ರ "

ಮೀಮಾಂಸಾ ಶಾಸ್ತ್ರ ಕೋವಿದ - ವಿದ್ವಾನ್ ಶ್ರೀ ಬಾಲ ಸುಬ್ರಹ್ಮಣ್ಯ ಶಾಸ್ತ್ರಿಗಳು 

" ವ್ಯಾಕರಣ " 

ವ್ಯಾಕರಣ ಕೋವಿದ ವಿದ್ವಾನ್ ಶ್ರೀ ಪೇರಿ ಸೂರ್ಯ ನಾರಾಯಣ ಶಾಸ್ತ್ರಿಗಳು 

" ಆಶ್ರಮ ಗುರುಗಳು "

ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಯತೀಂದ್ರ ತೀರ್ಥರು 

" ಆಶ್ರಮ ನಾಮ "

ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು 

" ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ ..... 

ಮೇದಿನಿಯೊಳಿಪ್ಪ -

ಸುಬುಧೇಂದ್ರತೀರ್ಥರ ।

ಪಾದ ಜಲಜ ಸ್ಮರಿಸುವನೇ -

ಧನ್ಯನು ।। ಪಲ್ಲವಿ ।।

ಮಂದಸ್ಮಿತ ಮುಖಾರವಿಂದ ।

ಚಂದದಿ ಪೊಳೆವೋ ರದನ ।

ಸುಂದರ ವದನ ಗುಣವ್ರಾತ ।

ಯಂದದಿ ಪಡೆದ ಸುಬುಧಾರ್ಯ ।। ಚರಣ ।।

ವೇದ ಮತೋದ್ಧಾರ । ರಾಘ ।

ವೇಂದ್ರರೆಂಬ ಶರಧಿಯೊ ।

ಳುದ್ಭವಿಸಿದ ಧೀವರ । ಶ್ರೀ ।

ಮಂತ ಯತಿ ಸುಬುಧಾರ್ಯ ।। ಚರಣ ।।

ಗುರು ರಾಘವೇಂದ್ರ ವಂಶದಿ ।

ಗುರು ಸುಶಮೀ೦ದ್ರರ ಪೌತ್ರ ।

ಗುರು ಸುಯತೀಂದ್ರ ಕುವರ । ಶೇಷ ।

ಗಿರೀಶ ವೇಂಕಟನಾಥನ -

ಪದಾರ್ಚಕನೇ । ನಮ್ಮ ।

ಗುರು ಸುಬುಧೇಂದ್ರ ಯತೀಂದ್ರ ।।

ವಿವರಣೆ :

ಪಾದ ಜಲಜ = ಪಾದ ಕಮಲ 

ಮಂದಸ್ಮಿತ = ಮುಗುಳ್ನಗೆ / ಮಂದಹಾಸ 

ರದನ = ಹಲ್ಲು 

ವದನ = ಮುಖ 

ಗುಣವ್ರಾತ = ಗುಣ ಸಮೂಹ / ಸದ್ಗುಣಗಳ ಸಮೂಹ 

ಶರಧಿ = ಸಮುದ್ರ 

ಧೀವರ = ಬುದ್ಧಿವಂತ 

by acharya nagaraju haveri, ಗುರು ವಿಜಯ ಪ್ರತಿಷ್ಠಾನ

*****


ಈದಿನ - 26.04.2021 ಸೋಮವಾರ - ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಜನುಮ ದಿನದ ಪರಮ ಪವಿತ್ರವಾದ ಶುಭದಿನ "

" ರಚನೆ "

ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ ....... 

ಸುಯತೀಂದ್ರ ಕರಕಂಜ ಜಾತ ।

ಸಂಯಮೀ೦ದ್ರ ಸುಬುಧೇಂದ್ರ -

ಸುಧೇನಿಭನಯ್ಯ ।। ಪಲ್ಲವಿ ।। 

ಸುಜಯೀ೦ದ್ರ ಸುತನ ಪೌತ್ರ ।

ಸುಜನ ಕುಮುದೇಂದು -

ದೇಶಿಕಮಣಿ ।। ಅ ಪ ।।

ಭಕುತರಿಗೆ ಅಮರತರುವಂತೆ ।

ಶ್ರೀಕಾಂತನ ಏಕಾಂತ ಭಕುತನ -

ದಯದಿ ಅಮರ್ದು ನೀಡುವೆ ।। ಚರಣ ।। 

ಏಕ ಚತುರ ನವ ಗ್ರಂಥಗಳ -

ವಿಬುಧಮಣಿಯೇ ।

ಏಕಮೂರ್ತಿ ಬಾದರಾಯಣರ -

ಸಿದ್ಧಾಂತ ಸ್ಥಾಪಕ ।। ಚರಣ ।।

ಮಂತ್ರಾಲಯ ವಾಸ ಮಂತ್ರಾಲಯ-

 ಪುರಾಧೀಶನ ಪ್ರೇಷ್ಠ ।

ಮಂತ್ರಮೇಯ ವೇಂಕಟ-

ನಾಥನ ಸೇವಿಪ ।

ಮಂತ್ರವಿದ ಸುಬುಧೇಂದ್ರ -

ಸುಧಾಹೃದ ಕಾಣೋ ।। ಚರಣ ।।

" ವಿವರಣೆ "

ಕರಕಂಜ ಜಾತ = ಕರ ಕಮಲದಿಂದ ಹುಟ್ಟಿದ 

ಸಂಯಮೀ೦ದ್ರ = ಯತಿ ಶ್ರೇಷ್ಠ  

ಸುಧೇನಿಭನಯ್ಯ = ಅಮೃತ ಸಮಾನಯ್ಯ 

" ಸುಜನ ಕುಮುದೇಂದು "

ಸುಜ್ಜನರೆಂಬ ಕೆನ್ನೈದೆಲೆಗೆ ಚಂದ್ರನಂತಿರುವವರು 

ಅಮರತರು = ಕಲ್ಪವೃಕ್ಷ 

ಅಮರ್ದು = ಅಮೃತ 

ಏಕ ಚತುರ ನವ ಗ್ರಂಥ = ಸರ್ವಮೂಲ

[ 1 + 4 x 9 = 37 ]

ವಿಬುಧ = ಜ್ಞಾನಿ 

ಏಕಮೂರ್ತಿ = ಸರಿಯೇ ಸರ್ವೋತ್ತಮ 

ಮಂತ್ರಮೆಯ = ಮಂತ್ರಗಳಿಂದ ತಿಳಿಯಲ್ಪಡುವವನು - ಶ್ರೀಹರಿ 

ಮಂತ್ರವಿದ = ಮಂತ್ರವನು ತಿಳಿದವರು 

ಸುಧಾಹೃದ = ಅಮೃತದ ಮಡು 

by Nagaraju Haveri, 

by ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ.

******

" ಈ ಸುದಿನ [ 26.05.21 ಬುಧವಾರ ] ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥರ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯ ಪಟ್ಟಾಭಿಷೇಕ ಮಹೋತ್ಸವ "

" ಶ್ರೀ ಸುಬುಧೇಂದ್ರ ತೀರ್ಥರ ಕಿರು ಪರಿಚಯ "

ಹೆಸರು : 

ಶ್ರೀ ರಾಜಾ ಎಸ ಪವಮಾನಾಚಾರ್ಯರು [ ಮೂಲರಾಮ ]

ತಂದೆ :

ಕಾಶೀ ವಿಶ್ವ ವಿದ್ಯಾಲಯದಿಂದ " ಪಂಡಿತ ಕೇಸರಿ " ಪ್ರಶಸ್ತಿ ಪುರಸ್ಕೃತರೂ - ಮಹಾಮಹೋಪಾಧ್ಯಾಯ - ಪರಮಪೂಜ್ಯ ಶ್ರೀ ಗಿರಿಯಾಚಾರ್ಯರು [ ಶ್ರೀ ಸುಜ್ಞಾನೇಂದ್ರಾಚಾರ್ಯರು ]

ತಾಯಿ : ಸಾಧ್ವೀ ಮಂಜುಳಾಬಾಯಿ 

ವಂಶ : ಷಾಷ್ಠಿಕ 

ಮನೆತನ : ಬೀಗಮುದ್ರೆ 

ಗೋತ್ರ : ಗೌತಮ 

" ವಿದ್ಯಾಭ್ಯಾಸ "

" ಪ್ರಾಚೀನ ಮತ್ತು ನವೀನ ನ್ಯಾಯ ಶಾಸ್ತ್ರ "

ರಾಷ್ಟ್ರಪತಿ ಪ್ರಶಸ್ತಿ ವಿಜೇತರಾದ ವಿದ್ವಾನ್ ಶ್ರೀ ಗೋಡಾ ಸುಬ್ರಹ್ಮಣ್ಯ ಶಾಸ್ತ್ರಿಗಳು 

ವ್ಯಾಕರಣ : ವಿದ್ವಾನ್ ಶ್ರೀ ಪೇರಿ ನಾರಾಯಣ ಶಾಸ್ತ್ರಿಗಳು 

ಮೀಮಾಂಸಾ : ವಿದ್ವಾನ್ ಶ್ರೀ ಬಾಲಸುಬ್ರಹ್ಮಣ್ಯ ಶಾಸ್ತ್ರಿಗಳು 

ದ್ವೈತ ವೇದಾಂತ : ಪರಮಪೂಜ್ಯ ಶ್ರೀ ಗಿರಿಯಾಚಾರ್ಯರು 

ವಿದ್ವಾನ್ ಶ್ರೀ ರಾಜಾ ಎಸ್ ಪವಮಾನಾಚಾರ್ಯರು ಚಿಕ್ಕಂದಿನಿಂದಲೂ ಆಧ್ಯಾತ್ಮಿಕ ವಿಚಾರಗಳಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದರು. 

ಆಧ್ಯಾತ್ಮಿಕ - ಅದರಲ್ಲೂ ವಿಶೇಷವಾಗಿ ಶ್ರೀ ಹರಿ ವಾಯು ಗುರುಗಳ ಬಗ್ಗೆ ಅನೇಕ ಪ್ರಮೇಯ ವಿಷಯಗಳ ಕುರಿತು ತಮ್ಮ ತಂದೆಯವರಲ್ಲಿ ಚರ್ಚೆ ಮಾಡುತ್ತಾ... 

ದ್ವೈತ ಮತದ ಪ್ರಸಾರ - ಪ್ರಚಾರಕ್ಕಾಗಿ ತಮ್ಮ ತಂದೆಯವರ ಅಧ್ಯಕ್ಷತೆ ಮತ್ತು ಮಾರ್ಗದರ್ಶನದಲ್ಲಿ... 

" ವ್ಯಾಸ ದಾಸ ಸಮನ್ವಯ ಪೀಠ "

ವನ್ನು ಸ್ಥಾಪಿಸಿ - ಭಾರತಾದ್ಯಂತ ದ್ವೈತ ಮತ ಪ್ರಚಾರ ಮಾಡುತ್ತಿದ್ದ ಪೂಜ್ಯ ಆಚಾರ್ಯರ ಸತ್ಕಾರ್ಯಕ್ಕೆ ಮೆಚ್ಚಿ... 

ಪೂಜ್ಯ ಆಚಾರ್ಯರೇ ನಮ್ಮ ಪರಮಪೂಜ್ಯ ಶ್ರೀ ಸುಯತೀಂದ್ರ ತೀರ್ಥರ ಉತ್ತರಾಧಿಕಾರಿಗಳು ಮತ್ತು ಪಟ್ಟದ ಶಿಷ್ಯರಾಗಲು ಸಮರ್ಥರೂ ಹಾಗೂ ಯೋಗ್ಯರೆಂದೂ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರು ನಿರ್ಧಾರ ಮಾಡಿ... 

ಶ್ರೀ ಸುಯತೀಂದ್ರ ತೀರ್ಥರಿಗೆ.... 

" ಪವಮಾನನಿಗೆ ಆಶ್ರಮ ಕೊಟ್ಟು ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕ "

ಮಾಡೆಂದು " ಸ್ವಪ್ನ ಸೂಚಕ " ಆಜ್ಞಾಪಿಸಿದರು. 

ಶ್ರೀ ರಾಯರ ಆಜ್ಞಾ ಮೇರೆಗೆ ಪರಮಪೂಜ್ಯ ಶ್ರೀ ಸುಯತೀಂದ್ರ ತೀರ್ಥರು - ಶ್ರೀ ರಾಜಾ ಎಸ ಪವಾಮಾಚಾರ್ಯರಿಗೆ ಫಲ ಮಂತ್ರಾಕ್ಷತೆ ಕೊಟ್ಟು ಸಂನ್ಯಾಸಕ್ಕೆ ಕರೆ ಕೊಟ್ಟರು. 

" ವಿದ್ವಾನ್ ಶ್ರೀ ಪವಾಮಾಚಾರ್ಯರು - ಶ್ರೀ ಸುಬುಧೇಂದ್ರ ತೀರ್ಥರಾಗಿ ವಿರಾಜಿಸಿದ್ದು " 

ದಿನಾಂಕ : 25.05.2013 - ಶ್ರೀ ವಿಜಯ ನಾಮ ಸಂವತ್ಸರ ವಸಂತ ಋತು ಉತ್ತರಾಯಣ ವೈಶಾಖ ಶುದ್ಧ ಪೌರ್ಣಿಮಾ ಶನಿವಾರ - ಇತಿಹಾಸ ಪುಟದಲ್ಲಿ ಸುವರ್ಣಾಕ್ಷರದಿಂದ ಬರೆದಿಡುವಂಥಾ ಪರಮ ಪವಿತ್ರವಾದ ಶುಭದಿನ.  

ಸಂನ್ಯಾಸಾಶ್ರಮದ ಮುಖ್ಯ ಹೊಣೆಗಾರಿಕೆಯನ್ನು ವಿದ್ವಾನ್ ಶ್ರೀ ವಾದಿರಾಜಾಚಾರ್ಯರು ಮತ್ತು ಶ್ರೀ ಮಠದ ಪುರೋಹಿತರು ಹೊತ್ತಿದ್ದರು. 

" ಯತಿ ಪ್ರಣವ ಕಲ್ಪ " ದ ವಚನದಂತೆ...

ಸಮಿಚ್ಚರ್ವಾಜ್ಯಕಾನ್ ಹುತ್ವಾ 

ಸಮ್ಯಕ್ ಪುರುಷಸೂಕ್ತತಃ ।

ಸರ್ವೇಷಾಮಭಯಂ ದತ್ವಾ 

ವಿರಕ್ತಃ ಪ್ರವ್ರಜೇದ್ಧರಿಮ್ ।।

ಶಾಸ್ತ್ರೋಕ್ತ ರೀತಿಯಿಂದ ಪುರುಷ ಸೂಕ್ತಾದಿ ಮಂತ್ರಗಳಿಂದ ಸಮಿತ್ತು - ಚರು - ಆಜ್ಯಗಳಿಂದ ಹೋಮ ಮಾಡಿ ಎಲ್ಲಾ ಪ್ರಾಣಿಗಳಿಗೆ ಅಭಯ ನೀಡಿ ವಿರಕ್ತನಾಗಿ ಪರಮಾತ್ಮನಿಗೆ ಪ್ರೀತಿಕರವಾದ ಸಂನ್ಯಾಸ ದೀಕ್ಷೆಯನ್ನು ಸ್ವೀಕರಿಸಬೇಕು.

" ಪಂಚರಾತ್ರಾಗಮ " ದನ್ವಯ....

ಸಂನ್ಯಾಸ ಪೂರ್ವಭಾವಿ ಕರ್ತವ್ಯಗಳು....

ಜೀವತ್ ಚ್ಛ್ರಾದ್ಧಂ ತಥಾ ಕ್ಷೌರಂ 

ಶಾಕಲಂ ಹೋಮ ಜಾಗರಮ್ ।

ಕೃತ್ವಾ ಪರೇದ್ಯುಃ ಪುಂಸೂಕ್ತ 

ವಿರಜಾಖ್ಯ ಸಹೋಮಕೇ ।

ಷಟ್ ಕೃತ್ವಾ ಸನ್ಯಸೇತ್ 

ಬ್ರಹ್ಮಚಾರ್ಯಥವಾ ಗೃಹೀ ।।

ಸಂನ್ಯಾಸವನ್ನು ಸ್ವೀಕರಿಸ ಬಯಸುವ ಬ್ರಹ್ಮಚಾರೀ ಅಥವಾ ಗೃಹಸ್ಥನು....

ಜೀವತ್ ಶ್ರಾದ್ಧ ( ಆತ್ಮಶ್ರಾದ್ಧ ) - ಕ್ಷೌರ - ಶಾಕಲ ಹೋಮ - ಜಾಗರ ಇವುಗಳನ್ನು ಮಾಡಿ...

ಪುರುಷಸೂಕ್ತ ಹೋಮ - ವಿರಜಾ ಹೋಮಮಾಡಿ ಸಂನ್ಯಾಸವನ್ನು ಸ್ವೀಕರಿಸಬೇಕು!!

ಶಾಸ್ತ್ರೋಕ್ತವಾಗಿ ಎಲ್ಲಾ ವಿಧಿ ವಿಧಾನಗಳನ್ನು ನೆರವೇರಿಸಿದರು. 

" ಅಭಯ ದಾನ "

" ವಸಿಷ್ಠ ಧರ್ಮ ಸೂತ್ರ " ದಲ್ಲಿ....

ಪರಿವ್ರಾಜಕಃ ಸರ್ವಭೂತಾಭಯ-

ದಕ್ಷಿಣಾಂ ದತ್ವಾ ಪ್ರತಿಷ್ಟೇತ । 

ಅತ್ರಾಪ್ಯುದಾಹರಂತಿ....ಅಭಯಂ 

ಸರ್ವ ಭೂತೇಭ್ಯೋ 

ದತ್ವಾ ಚರತಿ ಯೋ ಮುನಿ ।

ತಸ್ಯಾಪಿ ಸರ್ವ ಭೂತೇಭ್ಯೋ ನ 

ಭಯಂ ವಿದ್ಯತೇ ಕ್ವಚಿತ್ ।।

" ವಿಷ್ಣುಸ್ಮೃತಿ " ಯಲ್ಲಿ....

ಸರ್ವದಾನಾಧಿಕಮಭಯಪ್ರದಾನಮ್ ।।

ಎಲ್ಲಾ ವಿಧವಾದ ದಾನಕ್ಕಿಂತಲೂ ಸಜ್ಜನ ವರ್ಗಕ್ಕೆ ಅಭಯ ನೀಡುವುದು ಶ್ರೇಷ್ಠವಾದ ದಾನ.

ಎಲ್ಲಾ ಪ್ರಾಣಿಗಳಲ್ಲೂ ಪರಮಾತ್ಮನಿದ್ದಾನೆ.

ಸಕಲ ಪ್ರಪಂಚವೂ ಭಗವಂತನನ್ನು ಪ್ರವೃತ್ತ್ಯಾದಿಗಳಿಗೆ ಆಶ್ರಯಿಸಿದೆ ಎಂಬ " ಭಗವತ್ ಪ್ರಜ್ಞಾ " ಜಾಗೃತಿಯುಳ್ಲವನು ಮಾತ್ರ ತಾನು ಸ್ವಯಂ ನಿರ್ಭೀತನಾಗಿ  ಇನ್ನೊಬ್ಬರಿಗೆ ಅಭಯ ನೇಡಬಲ್ಲನು.

ಈ ಹಿನ್ನೆಲೆಯಲ್ಲಿ ಸಜ್ಜನ ವರ್ಗಕ್ಕೆ  -ಮನೋ - ವಾಕ್ - ಕಾಯಕರಣ " ಗಳಿಂದ ಅಪಚಾರವೆಸಗದೇ ಆ ಅಧಿಷ್ಠಾನದಲ್ಲಿರುವ ಭಗವಂತನನ್ನು ಸಮುಚಿತವಾಗಿ ಗೌರವಿಸುವುದೇ ಪ್ರಾಜ್ಞಾ ಜಾಗೃತಿಯ ಸಂಕೇತವಗಿದ್ದುಅಂಥವರು ಮಾತ್ರ ಅಭಯ ದಾನದಲ್ಲಿ ಪ್ರವೃತ್ತರಾಗುವರು.

ತುಂಗಭದ್ರೆಯಲ್ಲಿ ಸಂಕಲ್ಪ ಪೂರ್ವಕ ಸ್ನಾನ - ಸ್ನಾನಾನಂತರ... 

" ಈಶವಾಸ್ಯ ಭಾಷ್ಯ " ದಲ್ಲಿ....

ಸರ್ವಗಂ ಪರಮಾತ್ಮಾನಂ 

ಸರ್ವಂ ಚ ಪರಮಾತ್ಮನಿ ।

ಯಃ ಪಶ್ಯೇತ್ ಸ ಭಯಾಭಾವಾತ್ 

ನಾತ್ಮಾನಂ ಗೋಪ್ತುಮಿಚ್ಛತಿ ।।

ಎಲ್ಲಾ ಸಚ್ಚೇತನರಿಗೆ ಅಭಯ ನೀಡಿದ ಮೇಲೆ...

" ಸಂನ್ಯಾಸ ಪದ್ಧತಿ "ನಿಮಜ್ಯಾಪ್ಸು 

ತ್ರಿಶೋ ಹಸ್ತೇ ಶಿಖಾಯಜ್ಞೋಪವೀತಕೇ ।

ಆದಾಯ ಜುಹುಯಾದಪ್ಸು 

ಪ್ರಣವೇನ ಸಮಾಹಿತಃ ।।

ನೀರಿನಲ್ಲಿ ಮೂರುಬಾರಿ ಮುಳುಗಿ ಶಿಖಾ ಯಜ್ಞೋಪವೀತಗಳನ್ನು ಕೈಯಲ್ಲಿ ಹಿಡಿದು " ವನಾಯ ಸ್ವಾಹಾ " ಇತ್ಯಾದಿ ಮಂತ್ರಗಳಿಂದ ಅವುಗಳನ್ನು ನೀರಿನಲ್ಲಿ ವಿಸರ್ಜಿಸಿ - ಪ್ರಣವದಿಂದ ಭಗವಂತನನ್ನು ಧ್ಯಾನಿಸಬೇಕು.

ಅನಂತರ ಗೃಹಸ್ಥನು ನೀಡುವ ಕಟಿಸೂತ್ರ - ಕೌಪೀನ ಮತ್ತು ಎರಡು ಕಾವಿಶಾಟಿಗಳನ್ನು ಧಾರಣೆ ಮಾಡಿಕೊಂಡು..

" ಸಂನ್ಯಸ್ತಂ ಮಯಾ " 

[ ಸನ್ಯಸ್ತೋಹಂ - ಸನ್ಯಸ್ತೋಹಂ  - ಸನ್ಯಸ್ತೋಹಂ ]

ಯೆಂದು  ಮೂರು ಬಾರಿ ಘೋಷಣೆ ಮಾಡುವುದರೊಂದಿಗೆ ಸಂನ್ಯಾಸಾಶ್ರಯ ಪ್ರವೇಶವಾಯಿತು. ಎಂದು ವಿಧಿವತ್ತಾಗಿ ಗಟ್ಟಿಯಾಗಿ ಉಚ್ಛರಿಸಬೇಕು.

ಗೃಹಸ್ಥಾಶ್ರಮದಿಂದ ಸಂನ್ಯಾಸಾಶ್ರಮಕ್ಕೆ ಕಾಲಿಟ್ಟ ಶ್ರೀ ಆಚಾರ್ಯರಿಗೆ - ಪರಮಪೂಜ್ಯ ಶ್ರೀ ಸುಯತೀಂದ್ರ ತೀರ್ಥರ ಆದೇಶದ ಮೇರೆಗೆ ನೂತನ ಯತಿಗಳಿಗೆ.... 

ಅನಿರುದ್ಧಾದಿ ಭಗವದ್ರೂಪಗಳಿಗೆ ವಿತ್ತ - ದೇಹ - ಇಂದ್ರಿಯ - ಅಂತಃಕರಣ - ಸ್ವಾತ್ಮಗಳನ್ನು ಸಮರ್ಪಿಸಬೇಕು.

ಮಂತ್ರ ಪೂರ್ವಕ ದಂಡಧಾರಣೆ ಮಾಡಬೇಕು.

ಪ್ರಣವಮಂತ್ರೋಪದೇಶಕರಾದ ಗುರುಗಳು ತಪ್ತ ಮುದ್ರಾಧಾರಣೆ - ತಂತ್ರಸಾರೋಕ್ತ ವಿಧಿಯಿಂದ ಪೂಜಿತವಾದ " ಪಟ್ಟಾಭಿಷೇಕ ಕಲಶ ತೀರ್ಥ " ವನ್ನು ಶಿಷ್ಯನಿಗೆ " ಶಂ ನಃ " ಇತ್ಯಾದಿ ಸೂಕ್ತ ಮತ್ತು ಪುರುಷ ಸೂಕ್ತ ಮಂತ್ರಗಳಿಂದ ಪ್ರೋಕ್ಷಿಸಿ ಅಭಿಷೇಕ ಮಾಡಬೇಕು.

" ವಿಷ್ಣು ಸರ್ವೋತ್ತಮತ್ವ ಪ್ರತಿಪಾದನೆ ಪ್ರತಿಪಾದನೆ ಜೀವನದ ಉಸಿರಾಗಿರಬೇಕೆಂದೂ - ನಿರಂತರ ಶಾಸ್ತ್ರ ಪಾಠ ಪ್ರವಚನ ಪ್ರಣವ ಜಪಾದ್ಯಾಸಕ್ತನಾಗಿ ಸಂನ್ಯಾಸ ದೀಕ್ಷೆಯ ಉದ್ಧೇಶವನ್ನು ಸಾರ್ಥಕಗೊಳಿಸಬೇಕೆಂದೂ " ಉಪದೇಶಿಸಬೇಕು - 

ಅದರಂತೆ....  

ವೈದಿಕ ವಿಧಿ ವಿಧಾನ ಪೂರ್ವಕ ಸಂನ್ಯಾಸಾಶ್ರಮ ಸ್ವೀಕಾರ ಮಾಡಿ - ಗುರುಗಳಾದ ಪರಮಪೂಜ್ಯ ಶ್ರೀ ಸುಯತೀಂದ್ರ ತೀರ್ಥರ ಮಹಾ ಸನ್ನಿಧಾನಕ್ಕೆ ಬಂದು - ಭಕ್ತಿಯಿಂದ ಪಾದ ಪೂಜಾದಿಗಳನ್ನು ನೆರವೇರಿಸಿ ಸಾಷ್ಟಾಂಗ ಪ್ರಣಾಮ ಮಾಡಿ - ಕರ ಜೋಡಿಸಿ ನಿಂತಾಗ ತಮ್ಮ ಪ್ರಿಯ ಶಿಷ್ಯರಿಗೆ ಶ್ರೀ ಹರಿಯ ಚಿಹ್ನೆ ರೂಪವಾದ ತಪ್ತ ಮುದ್ರಾಧಾರಣೆ ಮಾಡಿ - 

ಗುರೂಪದೇಶ - ಪ್ರಣವ ಹಂಸ ಮಂತ್ರ -  ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನದಲ್ಲಿ ಹಿಂದಿನಿಂದ ನಡೆದು ಬಂದ ಕೆಲವು ರಹಸ್ಯ ಸಿದ್ಧಿ ಮಂತ್ರಗಳೂ - ಅಷ್ಟಾಕ್ಷರ ಮಂತ್ರಗಳನ್ನು ಉಪದೇಶ ಮಾಡಿದರು. 

" ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ "

" ಶ್ರೀ ಸುಮಧ್ವವಿಜಯ - 5/1 ".....

ವೇದಾಂತವಿದ್ಯಾನಿಜರಾಜ್ಯಪಾಲನೆ

ಸಂಕಲ್ಪ್ಯಮಾನೋ ಗುರುಣಾಗರೀಯಸಿ ।

ಅಧಭ್ರಚೇತಾ ಅಭಿಷಿಚ್ಯತೇ ಪುರಾ ಸ

ವಾರಿಭಿರ್ವಾರಿಜಪೂರಿತೈರಥ ।।

ಮಂಗಳ ವಾದ್ಯಗಳೂ - ವೇದ ಘೋಷ - ಸಚ್ಛಾಸ್ತ್ರ ಪಾರಾಯಣ - ದಾಸರ ಪದಗಳು ಲಯಬದ್ಧವಾಗಿ ಮೊಳಗುತ್ತಿರಲು - ಶುಭ ಮುಹೂರ್ತದಲ್ಲಿ ಗುರುಗಳಾದ ಪರಮಪೂಜ್ಯ ಶ್ರೀ ಸುಯತೀಂದ್ರ ತೀರ್ಥರು ತಮ್ಮ ಪ್ರಿಯ ಶಿಷ್ಯರನ್ನು ಆಶೀರ್ವದಿಸುತ್ತಾ.... 

ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರ ತೀರ್ಥರ ಗುರುಸಾರ್ವಭೌಮರ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ಮಂಡಿಸಿ - ಸತ್ಸಂಪ್ರದಾಯದಂತೆ ಶಿಷ್ಯರ ಶಿರದ ಮೇಲೆ ಶ್ರೀ ಕೃಷ್ಣ - ಶ್ರೀ ರಾಮ - ಶ್ರೀ ವೇದವ್ಯಾಸದೇವರ ವಿಗ್ರಹಗಳನ್ನಿರಿಸಿ - ಕನಕ, ರತ್ನ, ಪುಷ್ಪ, ಜಲವನ್ನು ಶಂಖದಲ್ಲಿಟ್ಟು - 

" ಕುಬೇರನಂತೆ ಶಿರಿವಂತರಾಗಿ -  ಜಗನ್ಮಂಗಳಮೂರ್ತಿಯಾದ ಶ್ರೀ ರಾಮಚಂದ್ರನಂತೆ ಮಂಗಳಪ್ರದರಾಗಿ ನಿರತರಾಗಿ -  ಶ್ರೀ ವಿಜಯೀ೦ದ್ರತೀರ್ಥರಂತೆ ಕೀರ್ತಿಶಾಲಿಗಳಾಗಿ - ಶ್ರೀ ರಾಯರಂತೆ ಭಕ್ತ ಪರಿಪಾಲಕರಾಗಿ - ನಮ್ಮಂತೆ ಶ್ರೀ ಕ್ಷೇತ್ರ ಮಂತ್ರಾಲಯ ಅಭಿವೃದ್ಧಿ ಹಾಗೂ ಭಕ್ತರ ಅನುಗ್ರಹಕ್ಕಾಗಿ ಕಂಕಣ ಬದ್ಧರಾಗಿ - ನಮ್ಮ ಶಿಷ್ಯರಾದ ಇವರು... 

" ಶ್ರೀ ಸುಬುಧೇಂದ್ರ ತೀರ್ಥ "

ರೆಂಬ ಅಭಿದಾನದಿಂದ ಅಭಿವೃದ್ಧಿಸಲಿ " ಎಂದು ನಾಮಕರಣ ಮಾಡಿ - ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯ ಪಟ್ಟಾಭಿಷೇಕ ಮಾಡಿದರು. 

ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಸತ್ಪರಂಪರೆಯಲ್ಲಿ ಮತ್ತೋರ್ವ " ಉಭಯ ವಂಶಾಬ್ಧಿ ಚಂದ್ರಮ " ರ ಉದಯವಾಯಿತು. 

" ಪ್ರಮಾಣ "

" ಶಂಖ ಜಲದಿಂದ ಅಭಿಷೇಕಿಸಿದರು " ಎಂಬ ಉಲ್ಲೇಖ " ಪೀಠಾಧಿಪತ್ಯ " ವಹಿಸುವ ಕ್ರಮದ ಬಗ್ಗೆ ಹೇಳುತ್ತದೆ.

ವೇದಾಂತ ವಿದ್ಯೆ ಅಂದರೆ ಬ್ರಹ್ಮ ಮೀಮಾಂಸಾ ಶಾಸ್ತ್ರ!!

" ಶ್ರೀ ಸೋದೆ ಮಠದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವೇದಾಂಗತೀರ್ಥರು " ಪದಾರ್ಥ ದೀಪಿಕಾ " ಯಲ್ಲಿ...

वेदांतविद्दानिजराज्यपालने 

संकल्पयमनो गुरुणा गरियसि ।

अदभ्रचेता अभिषिच्यते परा स 

वरिभिर्वारिजपूरितैरत ॥वेदान्तति । 

अथ सः अदभ्रचेता, दभ्रमल्पम्, अदभ्रमनल्पम्, परिपूर्ण चेतो वस्य सोsदभ्रचेताः, गुरुणा वारिजपूरितैः शंखपूरितैः वरिभिः जलैः अभिषिच्यते पुरा अभिषिक्तः । 

" यावतपुरानिपातयोर्लट् " इत्यतितातै ( ? ) लट् । कतभ्यूतः? गरीयसी अतिमहति " वेदांताविद्दा निजराज्य पालने " वेदांतविद्दा ब्रम्हामीमांसाशास्त्रं, तदेव निजराज्यम्, तस्य पालने व्याख्यानेना शिष्यादिषु सम्प्रदायप्रवर्तनाख्यरक्षणे तत्प्रतिकूलादिनिवाराणे च संकल्प्यमानः । वेदांतव्याख्यानाडिश्वयम् समर्थस्तत्र प्रवर्ततामिति मनसा संकल्प्य गुरुणा योगराज्येsभिषिक्तोsभूदिति भावः ॥

" ಯತಿ ಪ್ರಣವ ಕಲ್ಪದಂತೆ ಸಂನ್ಯಾಸಿಗಳ ಆದ್ಯ ಕರ್ತವ್ಯಗಳು "

ಅಹಿಂಸಾ ಪ್ರಥಮಂ ಪುಷ್ಪಂ 

ಪುಷ್ಪಮಿಂದ್ರಿಯ ನಿಗ್ರಹಃ ।

ಸರ್ವಭೂತದಯಾ ಪುಷ್ಪಂ

ಕ್ಷಮಾಪುಷ್ಪಂ ತಥೈವ ಚ ।।

ಜ್ಞಾನಪುಷ್ಪಂ ತಪಃ ಪುಷ್ಪಂ 

ಧ್ಯಾನ ಪುಷ್ಪಂ ತಥೈವ ಚ ।

ಸತ್ಯಂ ಚೈವಾಷ್ಟಮಂ ಪುಷ್ಪಂ 

ವಿಭಿಸ್ತುಷ್ಯತಿ ಕೇಶವಃ ।।

ಶ್ರುಣುಷ್ವ ವೈಷ್ಣವಂ ಶಾಸ್ತ್ರಂ 

ಸದಾ ವೇದಾರ್ಥತತ್ಪರಃ ।

ವೇದಾನ್ ಮಂತ್ರಾನುಪನಿಷತ್ 

ಸಹಿತಾನ್ ಸರ್ವದಾ ಶ್ರುಣು ।।

ಇತಿಹಾಸಂ ಪುರಾಣಂ ಚ 

ಪಂಚರಾತ್ರಂ ತಥೈವ ಚ ।

ತದರ್ಥಾನ್ ಬ್ರಹ್ಮಸೂತ್ರೈಶ್ಚ 

ಸಮ್ಯಜ್ ನಿರ್ಣಯ ತತ್ತ್ವತಃ ।

ವಿಷ್ಣೋಃ ಸರ್ವೋತ್ತಮತ್ವಂ ಚ 

ಸರ್ವದಾ ಪ್ರತಿಪಾದಯ ।।

ವಿಷ್ಣು ಸರ್ವೋತ್ತಮತ್ವ ಪ್ರತಿಪಾದಕವಾದ ಶಾಸ್ತ್ರವನ್ನು ಕೇಳು. 

ವೇದಾರ್ಥ ಚಿಂತನಾಶೀಲನಾಗಿ ಉಪನಿಷತ್ತುಗಳನ್ನು ವೇದಗಳನ್ನೂ ಶ್ರವಣ ಮಾಡು. 

ಇತಿಹಾಸ ಪುರಾಣ ಪಂಚರಾತ್ರಾದಿಗಳನ್ನು ಅಧ್ಯಯನ ಮಾಡಿ ಅವುಗಳ ಅರ್ಥವನ್ನು ಬಹ್ಮಸೂತ್ರದ ಮೂಲಕ ದೃಢಪಡಿಸಿಕೊಂಡು " ವಿಷ್ಣು ಸರ್ವೋತ್ತಮತ್ತ್ವ " ವನ್ನು ನಿರಂತರ ಪ್ರತಿಪಾದಿಸು " ಎಂಬ ಶ್ರೀಮದಾಚಾರ್ಯರ ಮಾತು!!.

ಶ್ರೀಮಾಚಾರ್ಯರ ಸತ್ಸಂಪ್ರದಾಯದಂತೆ ಪರಮಪೂಜ್ಯ ಶ್ರೀ ಸುಆಯತೀಂದ್ರ ತೀರ್ಥರಿಂದ ತುರ್ಯಾಶ್ರಮ ಪಡೆದು - ಅವರ ಅಮೃತಮಾಯಾ ಹಸ್ತಗಳಿಂದ ಸಾಕ್ಷಾತ್ ಹಂಸನಾಮಕ ಪರಮಾತ್ಮನ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯದ ಸಿಂಹಾಸನದಲ್ಲಿ ವಿರಾಜಮಾನರಾದ ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥರ ೯ನೇ ಪಟ್ಟಾಭಿಷೇಕ ಮಹೋತ್ಸವ. 

ಇದು ಶ್ರೀ ರಾಯರ ಭಕ್ತ - ಶಿಷ್ಯ ಜನಕ್ಕೆ ಸಂಭ್ರಮವೋ ಸಂಭ್ರಮದ ವಿಜಯ !!  

by ಆಚಾರ್ಯ ನಾಗರಾಜು ಹಾವೇರಿ 

     ಗುರು ವಿಜಯ ಪ್ರತಿಷ್ಠಾನ

******

ಜೀಯಾತ್ ಶ್ರೀಸುಬುಧೇಂದ್ರ ಸಂಯಮಿಮಣಿಹಿ ವೇದಾಂತ ರಾಜ್ಯೇಚಿರಂ...🙏🙏🙏

   ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ, ಮಂತ್ರಾಲಯ ಮಠದ ಪೀಠಾಧಿಪತಿಗಳಾಗಿ ವಿರಾಜಮಾನರಾಗಿರುವ  ಶ್ರೀ ಶ್ರೀಸುಬುಧೇಂದ್ರತೀರ್ಥ ಶ್ರೀಪಾದರು ಸದಾ ಹಸನ್ಮುಖಿಗಳು.

  ನಡೆದಾಡುವ ರಾಯರೆಂದೇ  ಖ್ಯಾತಿವೆತ್ತ  ಶ್ರೀಸುಶಮೀಂದ್ರತೀರ್ಥರ ಕರಕಮಲ ಸಂಜಾತರಾದ ಶ್ರೀಸುಯತೀಂದ್ರತೀರ್ಥರಿಂದ ತುರ್ಯಾಶ್ರಮ ಸ್ವೀಕರಿಸಿ ಅಮಿತ ಪುಣ್ಯಗಳಿಸಿಕೊಂಡವರು.

  ಗುರುಗಳ ಪೂರ್ವಾಶ್ರಮದ ಹೆಸರು ವಿದ್ವಾನ್ ಶ್ರೀ ರಾಜಾ ಎಸ್.ಪವಮಾನಾಚಾರ್ಯ.
ಶ್ರೀವಿರೋಧಿ ನಾಮ ಸಂವತ್ಸರ ಉತ್ತರಾಯಣ ಚೈತ್ರ ಶುದ್ಧ ಚತುರ್ದಶೀ ಉತ್ತರಾ ನಕ್ಷತ್ರ (09.04.1971) ದಂದು ಪಂಡಿತ ಕೇಸರಿಯಾದ  ಮಹಾ ಮಹೋಪಾಧ್ಯಾಯ ವಿದ್ವಾನ್ ರಾಜಾ ಶ್ರೀ ಗಿರಿಯಾಚಾರ್ಯರು ಹಾಗೂ ಸಾಧ್ವೀ ಮಂಜುಳಾಬಾಯಿಯವರ ಸುಪುತ್ರರಾಗಿ ಜನಿಸಿದರು.
  ತಂದೆ ಶ್ರೀ ರಾಜಾ ಎಸ್ ಗಿರಿಯಾಚಾರ್ಯರು, ರಾಷ್ಟ್ರಪತಿ ಪ್ರಶಸ್ತಿ ವಿಜೇತರಾದ ವಿದ್ವಾನ್ ಶ್ರೀ ಗೋಡಾ ಸುಬ್ರಹ್ಮಣ್ಯಶಾಸ್ತ್ರಿಗಳು, ವಿದ್ವಾನ್ ಶ್ರೀ ಪೇರಿ ನಾರಾಯಣ ಶಾಸ್ತ್ರಿಗಳು, ಪಂಡಿತ ಶ್ರೇಷ್ಠ ಶ್ರೀ ಬಾಲಸುಬ್ರಹ್ಮಣ್ಯ ಶಾಸ್ತ್ರಿಗಳ ಬಳಿ ಶಾಸ್ತ್ರ, ಕಾವ್ಯ, ಮೀಮಾಂಸ ಮತ್ತಿತರ ಸಕಲ ವಿಷಯಗಳ ಅಧ್ಯಯನ ನಡೆಸಿದರು.
   ಸಕಲ ಶಾಸ್ತ್ರಗಳ ಜತೆ ಸಂಸ್ಕೃತ, ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್, ತುಳು ಹಾಗೂ ಮರಾಠಿ ಭಾಷೆಗಳನ್ನು ಬಲ್ಲರು.

 ಇಂತಹ ಶ್ರೀಪವಮಾನಾಚಾರ್ಯರು, ಶ್ರೀವಿಜಯನಾಮ ಸಂವತ್ಸರ ವೈಶಾಖ ಶುದ್ಧ ಪೌರ್ಣಿಮಾ 25.05.2013 ರಂದು ಶನಿವಾರ ಶ್ರೀಸುಯತೀಂದ್ರತೀರ್ಥರಿಂದ ತುರ್ಯಾಶ್ರಮ ಸ್ವೀಕರಿಸಿ * ಶ್ರೀಸುಬುಧೇಂದ್ರತೀರ್ಥ* ರಾದರು.

  ಅಂದಿನಿಂದ ಇಂದಿನವರೆಗೆ ಸದಾ ಶ್ರೀಮನ್ಮೂಲರಾಮದೇವರ ಪಾದ ಸೇವಾನಿರತರಾಗಿ ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ. ಮಂತ್ರಾಲಯ ಕ್ಷೇತ್ರಕ್ಕೆ ಹೊಸ ಮೆರಗನ್ನು ನೀಡಿದರಲ್ಲದೇ, ಪೋಷಕರನ್ನು ಬಿಟ್ಟು ಕ್ಷೇತ್ರದಲ್ಲಿ ವ್ಯಾಸಂಗ ಮಾಡುತ್ತಿರುವ  ವಿದ್ಯಾರ್ಥಿಗಳ ಮನದಿಚ್ಛೆ ಪೂರೈಸಿ ಮಾತೃಪ್ರೀತಿ ತೋರಿದ ಮಹನೀಯರು.
  ತಾವಷ್ಟೇ, ತಮ್ಮ ಮಠವಷ್ಟೇ ಎನ್ನದೇ ಜಾತಿ ಮತ ಭೇದ ತೊರೆದು ಸಂಕಷ್ಟದಲ್ಲಿರುವವರ ಸಂತೈಸುವ ಮನಸ್ಸು ಇವರದು. ಈಶ ಸೇವೆಯ ಜತೆ ದೇಶ ಸೇವೆಯನ್ನು ನಡೆಸುವ ಮೂಲಕ ಶ್ರೀಮದಾಚಾರ್ಯರ ಆಶಯ ಪಾಲಿಸುತ್ತಿರುವ ಅಗಣಿತ ಗುಣ ಗಣಿಗಳಿವರು.
 ಇಂತಹ ಪರಮಪೂಜ್ಯರಿಗೆ ನಮ್ಮಂತಹ ಅಗಣಿತ ಪಾಮರ ರನ್ನು ಉದ್ಧರಿಸುವ ಅನನ್ಯ ಶಕ್ತಿಯನ್ನು  ಅನುಗ್ರಹಿಸಲಿ ಎಂದು ಶ್ರೀರಾಘವೇಂದ್ರ ಗುರು ಸಾರ್ವಭೌಮರಲ್ಲಿ ಬೇಡೋಣ.

 ಶ್ರೀಜಯತೀರ್ಥರಂತೆ ಗುಣಶಾಲಿಗಳಾಗಲಿ, ಶ್ರೀವಿಜಯೀಂದ್ರತೀರ್ಥರಂತೆ ಕೀರ್ತಿಶಾಲಿಗಳಾಗಲಿ, ಶ್ರೀರಾಘವೇಂದ್ರತೀರ್ಥರಂತೆ ಕರುಣಾ ಸಮುದ್ರರಾಗಲಿ, ಶ್ರೀಸುಶಮೀಂದ್ರತೀರ್ಥರಂತೆ ನಡೆದಾಡುವ ರಾಯರಾಗಲಿ....
ಶ್ರೀಗುರುಭ್ಯೋ ನಮಃ.....🙏🙏🙏

ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.


No comments:

Post a Comment